ಮಡಿಕೇರಿ NEWS DESK ಜ.19 : ಸಂಪಾಜೆ ಸ್ಥಳೀಯ ಸಂಸ್ಥೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ಮೂರು ದಿನಗಳ ಕಾಲ ಸಂಭ್ರಮದಿಂದ ನಡೆಯಿತು. ಚೆಂಬುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಹಿರಿಯರು ಹಾಗೂ ನಿವೃತ್ತ ಪ್ರಾಂಶುಪಾಲ ದಾಮೋದರ ಕೆ. ಅವರು ಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಹೊರಸಂಚಾರ ಕಾರ್ಯಕ್ರಮಕ್ಕೆ ಗ್ರಾ.ಪಂ ಸದಸ್ಯೆ ಹಂಸಲೇಖ ಚಾಲನೆ ನೀಡಿದರು. ಹೊರ ಸಂಚಾರದಲ್ಲಿ ಕಿಂಡಿ ಅಣೆಕಟ್ಟು, ಕೃಷಿ ಪದ್ಧತಿ ಮತ್ತು ಪರಿಸರದ ಕುರಿತು ವಿದ್ಯಾರ್ಥಿಗಳು ಮಾಹಿತಿ ಪಡೆದರು. ಎರಡನೇ ದಿನದ ಮೇಳದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಲಾಯಿತು. ವಿವೇಕ ಜಾಗೃತ ಬಳಗದ ಮೂಲಕ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್ ಹೊಸೂರು ಅವರು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ನಂತರ ಇದೇ ವೇದಿಕೆಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಮತ್ತು ಮಕ್ಕಳ ದಂತ ತಪಾಸಣಾ ಶಿಬಿರ ನಡೆಯಿತು. ಅತಿಥಿಗಳಾಗಿ ಪಾಲ್ಗೊಂಡಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಬಿ.ಕೆ ಅವರು ರಕ್ತದಾನದ ಕುರಿತ ವಿವರಿಸಿ ಮಕ್ಕಳಲ್ಲಿ ಅರಿವು ಮೂಡಿಸಿದರು. ಶಿಬಿರವನ್ನು ನಡೆಸಿಕೊಟ್ಟ ಡಾ.ಸಾಗರ್ ಅವರು ರಕ್ತದಾನ ಮತ್ತು ದಂತ ತಪಾಸಣೆಯ ಮಹತ್ವದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮಗಳನ್ನು ಗ್ರಾ.ಪಂ ಅಧ್ಯಕ್ಷರಾದ ತೀರ್ಥರಾಮ ಪಿ.ಜಿ ಉದ್ಘಾಟಿಸಿ ಶುಭ ಹಾರೈಸಿದರು. ಸುಮಾರು 31 ದಾನಿಗಳು ರಕ್ತದಾನ ಮಾಡಿದರು. ವಿದ್ಯಾರ್ಥಿಗಳಿಗಾಗಿ ಗ್ರಾಮೀಣ ಕ್ರೀಡೆಗಳಾದ ಹಗ್ಗಜಗ್ಗಾಟ, ತೆಂಗಿನಕಾಯಿಗೆ ಕಲ್ಲು ಒಡೆಯುವ ಸ್ಪರ್ಧೆ, ವಿವಿಧ ಸಾಹಸಮಯ ಕ್ರೀಡೆಗಳು, ಜಾನಪದ ಹಾಡು ಮತ್ತು ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಭವ್ಯ ಶಿಬಿರಾಗ್ನಿ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಎಂ.ಎನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಸೂರಜ್ ಹೊಸೂರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಮೂಡಿ ಬಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮಸ್ಥರ ಗಮನ ಸೆಳೆಯಿತು. ಶ್ರೀ ದೇವಿ ಭಜನಾ ಮಂಡಳಿಯಿಂದ ಭಜನೆ ಮತ್ತು ಭಜನಾ ಕುಣಿತ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮೂರು ದಿನಗಳ ಮೇಳದ ಕುರಿತು ಶಿಬಿರದ ನಾಯಕ ರಂಜಿತ್ ಕೆ.ಯು ವರದಿ ವಾಚಿಸಿದರು. ಶಿಬಿರಾರ್ಥಿಗಳಾದ ಸಹನ ಹಾಗೂ ಲಿತಿನ್ ಅನುಭವ ಹಂಚಿಕೊಂಡರು. ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಸಮಗ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಧನಂಜಯ ಎಂ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ಪದ್ಮಶ್ರೀ ವಿಜೇತ ಕಲಾವಿದೆ ರಾಣಿ ಮಾಚಯ್ಯ, ಪ್ರಮುಖರಾದ ಜಿಮ್ಮಿ ಸಿಕ್ವೇರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮೋಹನ್ ಪೆರುಮುಂಡ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿಯ ಅಧ್ಯಕ್ಷ ನವೀನ್ ರಾಮಕಜೆ, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಕುಮಾರ್, ಮೇಳದ ನಾಯಕಿ ಸುಲೋಚನ, ಸಹ ನಾಯಕರಾದ ಕುಮಾರಸ್ವಾಮಿ, ಸಗಾಯು ಮೇರಿ, ಮಹೇಶ್, ಸರಿತಾ ಕೆ.ಪಿ, ಸದಸ್ಯರು, ನಿವೃತ್ತ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ದಾನಿಗಳು, ಚೆಂಬು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆಯ ಸರ್ವ ಪದಾಧಿಕಾರಿಗಳು, ಗ್ರಾ.ಪಂ ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ನಾಪೋಕ್ಲು ಪ್ರೌಢ ಮತ್ತು ಪ್ರಾಥಮಿಕ ಶಾಲೆ, ಅಂಕುರ್ ಶಾಲೆ, ಶ್ರೀ ರಾಮ ಟ್ರಸ್ಟ್ ಶಾಲೆ, ಚೆಂಬುವಿನ ಸರಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ನೂರಕ್ಕಿಂತ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮೇಳದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಕೆ.ಬಿ.ಉಷಾರಾಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.