ಸೋಮವಾರಪೇಟೆ NEWS DESK ಜ.19 : ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಯಡವನಾಡು ಮೀಸಲು ಅರಣ್ಯದ ಕೂಪಾಡಿ ಗಿರಿಜನರ ಹಾಡಿಯ ತಮ್ಮಣ್ಣ(67) ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು. ಮೃತರ ತಾಯಿ ಬೋಜಿ ಅವರಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್ ಚೆಕ್ ವಿತರಿಸಿದರು. ಶಾಸಕ ಡಾ.ಮಂತರ್ಗೌಡ ಅವರ ಸೂಚನೆಯಂತೆ ಚೆಕ್ ವಿತರಿಸಲಾಗಿದೆ. ಪರಿಹಾರ ಹಣವನ್ನು ಉತ್ತಮ ಕಾರ್ಯಕ್ಕೆ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. ಹಾಡಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಕಾಡಾನೆಗಳ ಬಗ್ಗೆ ಎಚ್ಚರ ವಹಿಸಬೇಕು. ಮೀಸಲು ಅರಣ್ಯದೊಳಗೆ ತಿರುಗಾಡಬಾರದು. ಕಾಡಾನೆ ಕಂಡಾಗ ಕೂಡಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು. ಮಾನವರ ಮೇಲೆ ದಾಳಿ ಮಾಡುವ ಕಾಡಾನೆಗಳನ್ನು ಹಿಡಿದು ಪಳಗಿಸಲಾಗುವುದು. ಅಂತಹ ಆನೆಗಳನ್ನು ಕಂಡು ಹಿಡಿದು ಸೆರೆಹಿಡಿಯಲಾಗುವುದು ಎಂದು ಹೇಳಿದರು. ಚೆಕ್ ವಿತರಣೆ ಸಂದರ್ಭ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್, ಮೃತರ ಸಹೋದರ ಅಣ್ಣಯ್ಯ ಮತ್ತು ಹಾಡಿಯ ನಿವಾಸಿಗಳು ಇದ್ದರು.