ಮಡಿಕೇರಿ ಜ.20 NEWS DESK : ಒಳ್ಳೆಯತನವನ್ನು ಬೆಳೆಸಿ ಕೆಟ್ಟತನವನ್ನು ಅಳಿಸುವವರೇ ಗುರುಗಳು. ಅದರಲ್ಲಿಯೂ ತಾಯಿ ಅತ್ಯಂತ ಶ್ರೇಷ್ಠ ಶಿಕ್ಷಕಿ ಎಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯ ಮೂರ್ತಿಗಳಾದ ಎಂ.ಜಿ. ಶುಕುರೆ ಕಮಲ್ ಹೇಳಿದರು. ಸ್ಥಳೀಯ ಸರಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಗುರು ಶಿಷ್ಯರ ಸಮ್ಮಿಲನ ಮತ್ತು ಸ್ನೇಹ ಸಂಗಮ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಅವರು ತಮ್ಮ ಪ್ರೌಢಶಾಲಾ ಪ್ರವೇಶಾತಿಯಿಂದ ಮೊದಲ್ಗೊಂಡು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕ ಮತ್ತು ಶಿಕ್ಷಕಿಯರು ತಿದ್ದಿ ತೀಡಿದ ಬಗ್ಗೆ ನಿದರ್ಶಗಳನ್ನು ವಿವರಿಸಿದರು. ಶಿಕ್ಷಣ ವ್ಯವಸ್ಥೆ ಬೆಳೆದು ಬಂದ ಕಾಲವನ್ನು ಪ್ರಾಚೀನ ಮಧ್ಯಮ ಮತ್ತು ಆಧುನಿಕ ಕಾಲಗಳೆಂದು ವಿಶ್ಲೇಷಿಸಿದ ಅವರು ಮಠಗಳು, ಮಸೀದಿಗಳು ಮತ್ತು ಚರ್ಚ್‍ಗಳು ಪ್ರಾಚೀನ ಕಾಲದಲ್ಲಿ ವಿದ್ಯಾದಾನದ ಕೇಂದ್ರಗಳಾಗಿದ್ದವು. ಮಧ್ಯಮ ಕಾಲದಲ್ಲಿ ಸರಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯನ್ನು ಮುಂದುವರಿಸಿದವು. ಆಧುನಿಕ ಕಾಲಘಟ್ಟದಲ್ಲಿ ನಾವು ಕ್ರಾಂತಿಕಾರಿ ಆಲೋಚನೆಗಳನ್ನು ಹೊಂದಿದ್ದೇವೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುವ ಸಂದರ್ಭದಲ್ಲಿ ಸರಕಾರಿ ಶಾಲೆಗಳಲ್ಲಿ ಇನ್ನೂ ಕೂಡ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೌಕರ್ಯ ಮತ್ತು ಸಭಾಂಗಣಗಳು ಇಲ್ಲ ಎಂಬ ಮನವಿಗಳ ಕೂಗುಗಳು ಕೇಳಿ ಬರುತ್ತಲೇ ಇವೆ ಎಂದು ಅವರು ವಿಷಾದಿಸಿದರು. ಮಾಜಿ ಶಾಸಕರು ಹಾಗೂ ಶಾಲಾ ಕೊಠಡಿ ದಾನಿಗಳಾದ ಕೆ.ಎಂ. ಇಬ್ರಾಹಿಂ ಮಾಸ್ಟರ್ ಮಾತನಾಡಿ, ತಾವು ಸುಂಟಿಕೊಪ್ಪ ಪುರಸಭಾ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಆಗ ಮುಖ್ಯಮಂತ್ರಿಗಳಾಗಿದ್ದ ಆರ್.ಗುಂಡೂರಾವ್ ಮತ್ತು ಶಿಕ್ಷಣ ಸಚಿವರು ಬಂದಿದ್ದ ಸಂದರ್ಭದಲ್ಲಿ ಪ್ರೌಢಶಾಲೆಯೊಂದನ್ನು ಮಂಜೂರು ಮಾಡುವಂತೆ ಕೋರಿದೆ. ಆದರೆ ಕಟ್ಟಡ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಮಂಜೂರಾತಿಗೆ ನಿರಾಕರಿಸಿದಾಗ ಕಟ್ಟಡವನ್ನು ದಾನಿಗಳ ಮೂಲಕ ನಿರ್ಮಿಸಲಾಗುವುದು. ಪ್ರೌಢಶಾಲೆ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದೆ. ಈ ಹಿನ್ನಲೆಯಲ್ಲಿ ತಾನು ಮತ್ತು ದಾನಿಗಳಾದ ಡಿ.ವಿನೋದ್ ಶಿವಪ್ಪ ಮತ್ತು ಡಿ.ಆನಂದ್ ಬಸಪ್ಪ ಅವರುಗಳ ಸಹಕಾರದಿಂದ 3 ಕೊಠಡಿಗಳನ್ನು 2 ತಿಂಗಳ ಅವಧಿಯಲ್ಲಿ ಕಟ್ಟಿ ಪ್ರೌಢಶಾಲೆಯನ್ನು ಪ್ರಾರಂಭಿಸಿದನ್ನು ಕೆ.ಎಂ.ಇಬ್ರಾಹಿಂ ಸ್ಮರಿಸಿದರು. ಹಿರಿಯ ಹಾಗೂ ನಿವೃತ್ತ ಶಿಕ್ಷಕರಾದ ಶಿವಪ್ಪ ಮಾತನಾಡಿ, ಪಿತೃಭಕ್ತಿ ಗುರು ಭಕ್ತಿಯೊಂದಿಗೆ ದೇಶ ಭಕ್ತಿ ಹಾಗೂ ಒಳ್ಳೆಯತನವನ್ನು ಮೈಗೂಡಿಸಿಕೊಂಡಾಗ ಓರ್ವ ವ್ಯಕ್ತಿ ಜೀವನದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಎಸ್.ಸುನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿ ಸಿ. ಮಹೇಂದ್ರ ದಾನಿಗಳ ಪರಿಚಯವನ್ನು ಮಾಡಿದರು. ಕೆ.ಎಂ.ಇಬ್ರಾಹಿಂ, ಮಾಸ್ಟರ್, ಡಿ.ಆನಂದ ಬಸಪ್ಪ, ಡಿ.ವಿನೋದ್ ಶಿವಪ್ಪ ಮತ್ತು ಪಟ್ಟೆಮನೆ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಹಾಗೂ ವಿನೋದ್ ಶಿವಪ್ಪ ಮತ್ತು ಇತರ ಗಣ್ಯರು ನ್ಯಾಯಮೂರ್ತಿ ಎಂ.ಜಿ.ಶುಕುರೆ ಕಮಲ್ ಅವರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಪ್ರಸ್ತುತ ಬೃಹತ್ ಬೆಂಗಳೂರು ನಗರಪಾಲಿಕೆಯಲ್ಲಿ ಸಹಾಯಕ ಆಯುಕ್ತಕರಾಗಿರುವ ಪಿ.ಎಸ್.ಮಹೇಶ್ ಕುಮಾರ್, ರಾಮನಗರ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ನಾಗಮ್ಮ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗಧಾಮಯ್ಯ, ನಿವೃತ್ತ ಪ್ರಾಂಶುಪಾಲರಾದ ರಜಿನಾ ಪಿ. ಮಾಲಕಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಗೀತಾ ಪಾರ್ಥ, ಉಪ ಪ್ರಾಂಶುಪಾಲ ಬಾಲಕೃಷ್ಣ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸ್ವಾಗತ ನೃತ್ಯ, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ವೀಣಾ ಮತ್ತು ಶೋಭಾ ಪ್ರಾರ್ಥಿಸಿ, ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿ ವೆಂಕಪ್ಪ ಕೋಟ್ಯಾನ್ ಸ್ವಾಗತಿಸಿ, ಲಿಯೋನಾ ಸಬಾಸ್ಟೀನ್ ಕಾರ್ಯಕ್ರಮ ನಿರೂಪಿಸಿದರು.