ವಿರಾಜಪೇಟೆ ಜ.20 NEWS DESK : ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಿ ಅಭಿವೃದ್ಧಿಯತ್ತ ಸಾಗುತ್ತಿದೆ. ವಿರಾಜಪೇಟೆ ನಗರದ ಅಭಿವೃದ್ಧಿಗೆ ಶಾಸಕರು ಪಣತೊಟ್ಟಿರುವ ಹಿನ್ನೆಲೆಯಲ್ಲಿ ಸುಮಾರು 10 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ವಿರಾಜಪೇಟೆ ನಗರ ಕಾಂಗ್ರೆಸ್ ಸಮಿತಿ ತಿಳಿಸಿದೆ. ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ನಗರಾಧ್ಯಕ್ಷ ಮಾದಂಡ ಪಿ.ತಿಮ್ಮಯ್ಯ ಮಾತನಾಡಿ,ನಗರಾಭಿವೃದ್ಧಿಗೆ ಬಿಡುಗಡೆಗೊಳಿಸಿದ ಅನುದಾನಗಳ ಕುರಿತು ಮಾಹಿತಿ ನೀಡಿದರು. ಸುಂದರ ನಗರ ಸ್ವಚ್ಛ ನಗರದ ಪರಿಕಲ್ಪನೆಯೊಂದಿಗೆ ವಿರಾಜಪೇಟೆ ನಗರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿರುವುದಾಗಿ ತಿಳಸಿದರು. ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಈ ಹಿಂದೆ ಚುನಾವಣೆ ಸಂದರ್ಭ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಅಂಶಗಳಿಗೆ ಅನುಗುಣವಾಗಿ ಗೋಣಿಕೊಪ್ಪ ರಸ್ತೆಯ ಕಾವೇರಿ ಕಾಲೇಜಿನಿಂದ ದೊಡ್ಡಟ್ಟಿ ಚೌಕಿಯವರೆಗಿನ ರಸ್ತೆ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 5 ಕೋಟಿ 22 ಲಕ್ಷ ಅನುದಾನ, ಜೈನರ ಬೀದಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ನಾಗರಕಟ್ಟೆ ಉದ್ಯಾನವನ ನಿರ್ಮಾಣಕ್ಕೆ ಮತ್ತು ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ 3 ಕೋಟಿ 16 ಲಕ್ಷ ರೂಗಳ ಅನುದಾನ, ಅರಸುನಗರ ಪಾದಚಾರಿ ಮಾರ್ಗ ಮತ್ತು ಮೆಟ್ಟಿಲು ನಿರ್ಮಾಣಕ್ಕೆ 1 ಕೋಟಿ 72 ಲಕ್ಷ ರೂ., ಛತ್ರಕೆರೆ ಅಭಿವೃದ್ಧಿ ಕಾಮಗಾರಿ 1ಕೋಟಿ 32 ಲಕ್ಷ ರೂ., ಐತಿಹಾಸಿಕ ಗೌರಿಕೆರೆ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ 32 ಲಕ್ಷ, ವಿರಾಜಪೇಟೆ ನಗರಕ್ಕೆ ಸಮರ್ಪಕ ಕುಡಿಯುವ ನೀರು ಯೋಜನೆಗಾಗಿ 58 ಕೋಟಿ 38 ಲಕ್ಷ, ವಿರಾಜಪೇಟೆ ಪುರಸಭೆಯ ವ್ಯಾಪ್ತಿಯ ರಸ್ತೆ ಚರಂಡಿ ಮತ್ತು ತಡೆಗೋಡೆ ದುರಸ್ತಿ ಕಾರ್ಯಕ್ಕೆ ವಿರಾಜಪೇಟೆ ಪುರಸಭೆಗೆ 1 ಕೋಟಿ ಅನುದಾನ ಒದಗಿಸಿರುವುದಾಗಿ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರುಗಳಾದ ಶಾಹುಲ್ ಹಮೀದ್, ಕೆ.ಇ.ದಿನೇಶ್, ಸಿ.ಎಂ.ನಂಬಿಯಾರ್, ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಂ.ಶಶೀಧರನ್ ಮತ್ತು ಸಂಘಟನಾ ಕಾರ್ಯದರ್ಶಿ ಶಾನ್ ಉಪಸ್ಥಿತರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ