ಮಡಿಕೇರಿ ಜ.21 NEWS DESK : ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ವಿದ್ಯುತ್ ಎನ್ನುವುದು ಇಂದಿಗೂ ಮರೀಚಿಕೆ. ಇಂತಹ ವಿದ್ಯುತ್ ನಂಬಿ ಕೃಷಿ ಚಟುವಟಿಕೆಗಳಿಗೆ ನೀರಾವರಿ ಮಾಡುವುದೆಂದರೆ ದುಸ್ಸಾಹಸ. ಕೊರತೆಗಳನ್ನು ಮೀರಿ ಇಲ್ಲೊಬ್ಬರು ಕೃಷಿಕರು ‘ಸೋಲಾರ್ ವಿದ್ಯುತ್’ ಮೂಲಕ ತಮ್ಮ ಕಾಫಿ ತೋಟಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ನೆಮ್ಮದಿಯ ಕೃಷಿ ಜೀವನ ನಡೆಸುತ್ತಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಲೂರು ಸೂದನ ಸತೀಶ್ ಅವರು, ವಿದ್ಯುತ್ ಸಮಸ್ಯೆಯಿಂದ ತಮ್ಮ ಕಾಫಿ ತೋಟಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗದೆ ಸಂಕಷ್ಟವನ್ನೆದುರಿಸುತ್ತಿದ್ದರು. ಈ ಹಂತದಲ್ಲಿ ಇವರ ಕೈ ಹಿಡಿದದ್ದು ಸೋಲಾರ್ ವಿದ್ಯುತ್. ಪ್ರಸ್ತುತ ಇವರು 2 ಎಕರೆ ಕಾಫಿತೋಟಕ್ಕೆ ಸೋಲಾರ್ ಪಂಪ್ ಸೆಟ್‍ನ್ನು ಅಳವಡಿಸಿದ್ದಾರೆ. ಮೊಬೈಲ್‍ನಲ್ಲೂ ನಿಯಂತ್ರಿಸಬಹುದಾದ ಡಿಜಿಟಲ್ ತಂತ್ರಜ್ಞಾನದ 5ಹೆಚ್.ಪಿ ಪಂಪ್ ಸೆಟ್‍ನಲ್ಲಿ ಮೂರು ಜೆಟ್ ಅಳವಡಿಸಿಕೊಂಡು ಕೃಷಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಎದುರಾದಾಗ ದುಬಾರಿ ವೆಚ್ಚದೊಂದಿಗೆ ಡೀಸೆಲ್ ಪಂಪ್ ಗಳನ್ನು ಬಳಸಿ ಕೃಷಿ ಫಸಲಿಗೆ ನೀರು ಹಾಯಿಸುವುದು ಸಾಮಾನ್ಯ. ಆದರೆ ಪ್ರಸ್ತುತ ದಿನಗಳಲ್ಲಿ ಇದು ಕೃಷಿಕನಿಗೆ ಹೊರೆಯೇ ಆಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಸೋಲಾರ್ ಮೋಟಾರ್ ಹೆಚ್ಚು ಅನುಕೂಲಕರವಾಗಿದ್ದು, ಇದು ಕೃಷಿಕ ಸೂದನ ಸತೀಶ್ ಅವರ ಕೈ ಹಿಡಿದಿದೆ. ಈ ಬಗ್ಗೆ ಅನುಭವ ಹಂಚಿಕೊಂಡ ಸೂದನ ಸತೀಶ್ ಅವರು, ದೂರದಲ್ಲಿರುವ ಕಾಫಿ ತೋಟಕ್ಕೆ ವಿದ್ಯುತ್ ಅಳವಡಿಕೆ ಮಾಡಲು ಅಂದಾಜು ಹತ್ತು ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಕಡಿಮೆ ವೆಚ್ಚದಲ್ಲಿ ತೋಟದಲ್ಲೇ ಸೋಲಾರ್ ಪ್ಯಾನೆಲ್ ಅಳವಡಿಸಿಕೊಂಡು ಕೊಳವೆಬಾವಿಯಿಂದ ತೋಟಕ್ಕೆ ನೀರು ಹಾಯಿಸುವ ವ್ಯವಸ್ಥೆ ಮಾಡಿಕೊಂಡಿದ್ದೇನೆ. ಮೊಬೈಲ್ ಫೋನ್ ನಿಂದಲೂ ನೀರು ಹಾಯಿಸುವುದನ್ನು ನಿಯಂತ್ರಿಸಬಹುದಾದ ಹೊಸ ತಂತ್ರಜ್ಞಾನವು ಇರುವುದರಿಂದ ಸಮಸ್ಯೆ ಬಗೆಹರಿದಿದೆ. ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವ ಸೋಲಾರ್ ಪಂಪ್ ಅಳವಡಿಕೆಗೆ ಸರಕಾರ ಸಹಾಯ ಧನ ಒದಗಿಸಿ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು. ಈ ಹೊಸ ಸೋಲಾರ್ ಪಂಪ್ ಸೆಟ್‍ನ್ನು ಮೈಸೂರಿನ ಸೋಲಾರ್ ಕಂಪೆನಿಯೊಂದು ಪರಿಚಯಿಸಿದ್ದು, ಈಗಾಗಲೇ ಪಾಲಿಬೆಟ್ಟ, ಗೋಣಿಕೊಪ್ಪ, ಸಿದ್ದಾಪುರ, ಚೆಟ್ಟಳ್ಳಿ, ಕುಶಾಲನಗರ ಸೇರಿದಂತೆ ವಿವಿಧೆಡೆ ಅಳವಡಿಕೆ ಮಾಡಿದೆ. ಕೊಡಗಿನಲ್ಲಿ ಕಾಫಿ ಕೊಯ್ಲು ಪ್ರಾರಂಭವಾಗಿದ್ದು, ಕೊಯ್ಲಿನ ನಂತರ ತೋಟಗಳಿಗೆ ನೀರು ಹಾಯಿಸಬೇಕಾಗುತ್ತದೆ. ಈ ಹಂತದಲ್ಲಿ ಸರ್ವೇ ಸಾಮಾನ್ಯವಾಗಿ ವಿದ್ಯುತ್ ಸಮಸ್ಯೆ ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತದೆ. ಪ್ರಮುಖವಾಗಿ ವಿದ್ಯುತ್ ಇದ್ದರೂ ವೋಲ್ಟೇಜ್ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಇದೀಗ ಸೋಲಾರ್ ವಿದ್ಯುತ್ ಪಂಪ್ ಸೆಟ್ ಕೃಷಿಕರಿಗೆ ವರದಾನವಾಗಿ ಪರಿಣಮಿಸಿದೆ.