ಮಡಿಕೇರಿ NEWS DESK ಜ.21 : ರಾಜ್ಯದ ವಿವಿಧೆಡೆ ದರೋಡೆ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಕೊಡಗು ಜಿಲ್ಲಾ ಪೊಲೀಸ್ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಇಂದು ಮಡಿಕೇರಿಯಲ್ಲಿ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳು, ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಆಭರಣದಂಗಡಿಗಳ ಮಾಲೀಕರುಗಳ ಸಭೆಯನ್ನು ನಡೆಸಿದರು. ಎಲ್ಲಾ ಸಂಸ್ಥೆಗಳಲ್ಲಿ ಕೈಗೊಳ್ಳಬೇಕಾದ ಭದ್ರತಾ ವ್ಯವಸ್ಥೆ, ಅಪರಾಧ ಪ್ರಕರಣವನ್ನು ತಡೆಗಟ್ಟುವಲ್ಲಿ ಪರಸ್ಪರ ಸಹಕಾರ, ಪೊಲೀಸರ ಪಾತ್ರ ಇತ್ಯಾದಿ ವಿಚಾರಗಳ ಕುರಿತು ಚರ್ಚಿಸಿ ಸಲಹೆಗಳನ್ನು ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಹಾಗೂ ವಿವಿಧ ವಿಭಾಗಗಳ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
:: ಎಸ್ಪಿ ನೀಡಿರುವ ಸಲಹೆಗಳು :: ಬ್ಯಾಂಕ್‍ಗಳು, ಫೈನಾನ್ಸ್ ಸಂಸ್ಥೆಗಳು ಮತ್ತು ಆಭರಣ ಮಳಿಗೆಗಳ ಒಳಗೆ ಮತ್ತು ಹೊರಗೆ ಸಿಸಿಟಿವಿಗಳನ್ನು ಅಳವಡಿಸುವುದು ಹಾಗೂ ಸಿಸಿಟಿವಿಗಳು ಸರಿಯಾಗಿ ಕಾರ್ಯನಿರ್ವಹಿಸುವ ಬಗ್ಗೆ ನಿಯಮಿತವಾಗಿ ಪರಿಶೀಲಿಸುವುದು, ಬ್ಯಾಂಕ್/ಹಣಕಾಸು ಸಂಸ್ಥೆ/ಆಭರಣ ಮಳಿಗೆಗಳು ಹಗಲು ಮತ್ತು ರಾತ್ರಿಯ ದೃಶ್ಯವು ಸರಿಯಾಗಿ ಕಾಣುವಂತಹ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಗಳನ್ನು ಅಳವಡಿಸಿಕೊಳ್ಳುವುದು, ಬ್ಯಾಂಕ್‍ಗಳು, ಫೈನಾನ್ಸ್ ಸಂಸ್ಥೆಗಳು ಮತ್ತು ಆಭರಣ ಮಳಿಗೆಗಳಲ್ಲಿ ಸಿಸಿಟಿವಿ ಫೋಟೇಜ್‌ಗಳನ್ನು ಕ್ಲೌಡ್ ಸ್ಟೋರೇಜ್ ಅಥವಾ ಬದಲಿ (Duplicate) ಸ್ಟೋರೇಜ್‍ನಲ್ಲಿಯೂ ಸಹ ಸೇವ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದು.
ಸಿಸಿ ಕ್ಯಾಮರದಲ್ಲಿ ದಾಖಲಾಗುವ ದೃಶ್ಯವಾಳಿಯ ಮಾಹಿತಿಯು ಕನಿಷ್ಟ 6 ತಿಂಗಳವರೆಗೆ ಸಂಗ್ರಹವಾಗಿರುವಂತೆ ನೋಡಿಕೊಳ್ಳುವುದು, ಬ್ಯಾಂಕ್‍ಗಳು, ಫೈನಾನ್ಸ್ ಸಂಸ್ಥೆಗಳು ಮತ್ತು ಆಭರಣ ಮಳಿಗೆಗಳಲ್ಲಿ Burglar Alaram ಅನ್ನು ಆಳವಡಿಸುವುದರಿಂದ ಸ್ಥಳೀಯರಿಗೆ ಅನಧಿಕೃತ ಪ್ರವೇಶದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ, ಬ್ಯಾಂಕ್/ಹಣಕಾಸು ಸಂಸ್ಥೆಗಳು ತಮ್ಮ ಪ್ರಧಾನ ಕಚೇರಿಗಳಿಂದ ನೀಡಲಾಗುವ ಶಿಷ್ಟಾಚಾರ/ನಿಯಮಗಳ ಅನ್ವಯ ಕಾರ್ಯ ನಿರ್ವಹಿಸುವುದು, ಎಟಿಂಗೆ ಹಣ ಸಾಗಾಟದ ಸಂದರ್ಭ ತಮ್ಮ ಪ್ರಧಾನ ಕಚೇರಿಗಳಿಂದ ನೀಡಲಾಗುವ ಶಿಷ್ಟಾಚಾರ/ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು.
ಬ್ಯಾಂಕ್‍ಗಳು, ಫೈನಾನ್ಸ್ ಸಂಸ್ಥೆಗಳು ಮತ್ತು ಆಭರಣ ಮಳಿಗೆಗಳ ಸುತ್ತ-ಮುತ್ತ ಹಾಗೂ ವ್ಯವಹಾರ ನಡೆಯುವ ಸಂದರ್ಭ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಈ ಕುರಿತು ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಯವಾಣಿ 112 ಕ್ಕೆ ಮಾಹಿತಿ ನೀಡುವುದು, ಹಣ ಸಾಗಾಟದ ವಾಹನಕ್ಕೆ ತಮ್ಮ ಪ್ರಧಾನ ಕಚೇರಿಗಳಿಂದ ನೀಡಲಾಗುವ ಶಿಷ್ಟಾಚಾರ/ನಿಯಮಗಳ ಅನ್ವಯ ಅಗತ್ಯ ಭದ್ರತಾ ಸಿಬ್ಬಂದಿಯವರನ್ನು ನಿಯೋಜಿಸುವುದು, ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧವನ್ನು ತಡೆಗಟ್ಟಲು ಹಗಲು ಮತ್ತು ರಾತ್ರಿ ಬೀಟ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಸಹಕರಿಸುವಂತೆ ಕೋರಿದೆ, ಬ್ಯಾಂಕ್‍ಗಳು ಮತ್ತು ಫೈನಾನ್ಸ್ ಸಂಸ್ಥೆಗಳು Corporate Social Responsibility ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅಪರಾಧ ಕೃತ್ಯ ಎಸಗುವವರಲ್ಲಿ ಭಯದ ವಾತವರಣ ಸೃಷ್ಟಿಯಾಗಿ ಕೃತ್ಯ ಎಸಗಲು ಹಿಂದೇಟು ಹಾಕುವ ಸಾಧ್ಯತೆಗಳಿರುತ್ತದೆ, ಬ್ಯಾಂಕ್‍ಗಳು, ಫೈನಾನ್ಸ್ ಸಂಸ್ಥೆಗಳು ಮತ್ತು ಆಭರಣ ಮಳಿಗೆಗಳಲ್ಲಿ ತುರ್ತು ಸಹಾಯವಾಣಿ-112, ಪೊಲೀಸ್ ಕಂಟ್ರೋಲ್ ರೂಂ, ಸ್ಥಳೀಯ ಪೊಲೀಸ್ ಠಾಣೆ, ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಮತ್ತು ಪೊಲೀಸ್ ಅಧೀಕ್ಷಕರು ರವರುಗಳ ದೂರವಾಣಿ/ಮೊಬೈಲ್ ಸಂಖ್ಯೆಗಳನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಹಾಕುವುದು.