ಮಡಿಕೇರಿ NEWS DESK ಜ.21 : ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕುಟುಂಬ ಕಲ್ಯಾಣ ಶಸ್ತç ಚಿಕಿತ್ಸೆಗೆ ಒಳಗಾದ ಸಂದರ್ಭ ಮಹಿಳೆಯೊಬ್ಬರು ಅಸ್ವಸ್ಥರಾಗಿ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಆಸ್ಪತ್ರೆಗೆ ಕರೆ ತರುವ ಹಂತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕುಶಾಲನಗರ ಬಳಿಯ ಮಾದಾಪಟ್ಟಣದ ನಿವಾಸಿ ಚಲ್ಲದೊರೆ ಎಂಬವರ ಪತ್ನಿ ಶಾಂತಿ(27) ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಮೃತರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕುಟುಂಬ ಕಲ್ಯಾಣ ಶಸ್ತç ಚಿಕಿತ್ಸಾ ಶಿಬಿರದಲ್ಲಿ ಶಾಂತಿ ದಾಖಲಾಗಿದ್ದರು. ಇಂದು ಶಸ್ತç ಚಿಕಿತ್ಸೆ ನಡೆಸಬೇಕು ಎನ್ನುವ ಹಂತದಲ್ಲಿ ಶಾಂತಿ ಅವರು ಅಸ್ವಸ್ಥಗೊಂಡಿದ್ದು, ಇವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ, ಅಷ್ಟರಲ್ಲೆ ಶಾಂತಿ ಕೊನೆಯುಸಿರೆಳೆದಿದ್ದರು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ::: ಸ್ಥಳಕ್ಕೆ ಎಸ್‌ಪಿ ಭೇಟಿ ::: ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಘಟನೆಗೆ ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.