ಮಡಿಕೇರಿ NEWS DESK ಜ.21 : ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸುಪ್ರೀಮ್ ಸೋಲಾರ್ ಸಿಲಿಕಾನ್ ಟ್ರೇಡ್ ಅಂಗಡಿಯಲ್ಲಿ ನಗದು ಕಳ್ಳತನ ಮಾಡಿದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಅಳುವಾರ ಗ್ರಾಮದ ನಿವಾಸಿ ದಯಾನಂದ (27) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ ರೂ.2,16,500 ನಗದು ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ. ಅಂಗಡಿಯ ಹಿಂಬಾಗದ ರೋಲಿಂಗ್ ಸೆಟ್ರಸ್ ಅನ್ನು ಮುರಿದು ಸಿಸಿ ಕ್ಯಾಮೆರಾಗಳನ್ನು ನಾಶಗೊಳಿಸಿ ಟೇಬಲ್ ಡ್ರಾನಲ್ಲಿ ಇಟ್ಟಿದ್ದ ನಗದು ರೂ.2,16,500 ನಗದು ಕಳವಾಗಿರುವ ಕುರಿತು ಜ.20 ರಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಮಾವಾರಪೇಟೆ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಪಿಐ ಪ್ರಕಾಶ್.ಬಿ.ಜಿ, ಪಿಎಸ್‌ಐ ಗೀತಾ, ಕುಶಾಲನಗರ ಪೊಲೀಸ್ ಠಾಣೆ, ಅಪರಾಧ ಪತ್ತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ತನಿಖೆ ಕೈಗೊಂಡು ಪ್ರಕರಣ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು ಬೇಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.