ಮಡಿಕೇರಿ NEWS DESK ಜ.23 : ತೋಟಗಾರಿಕೆ ಇಲಾಖೆಯು ಜಿಲ್ಲಾ, ಆಡಳಿತ, ಜಿಲಾ, ಪಂಚಾಯತ್ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಭಾರತ ದೇಶದ ಗಣರಾಜ್ಯೋತ್ಸವದ ಪ್ರಯುಕ್ತ ಜ.24 ರಿಂದ 27 ರವರೆಗೆ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಫಲಪುಷ್ಪ ಪ್ರದರ್ಶನದ ಉದ್ಘಾಟನೆಯನ್ನು24 ರಂದು ಮಧ್ಯಾಹ್ನ 3 ಗಂಟೆಗೆ ಕೊಡಗು ಉಸ್ತುವಾರಿ ಸಚಿವರು ಮಾಡಿಲಿದ್ದು, ಜಿಲ್ಲೆಯ ಶಾಸಕರುಗಳು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲಿ.. ಸುಮಾರು 7000 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳು ಹಾಗೂ ಬೆಡ್ ಗಳಲ್ಲಿ ಸುಮಾರು 20000 ವಿವಿಧ ಜಾತಿಯ ಹೂವುಗಳಾದ ಸಾಕ್ಷಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್, ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ. ::: ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು::: 1. ಕೊಡಗಿನ ಪ್ರಸಿದ್ದ ಶ್ರೀ ಓಂಕಾರೇಶ್ವರ ದೇವಸ್ಥಾನದ ಕಲಾಕೃತಿಯನ್ನು 22 ಅಡಿ ಎತ್ತರದಲ್ಲಿ 30 ಅಡಿ ಉದ್ದ, 38 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಮರ್ ಜಾತಿಯ ಸುಮಾರು 5 ಲಕ್ಷ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು. 2. ಕರ್ನಾಟಕ ಸರ್ಕಾರದ, ತೋಟಗಾರಿಕೆ ಇಲಾಖೆಯಿಂದ ಕರ್ನಾಟಕ ರಾಜ್ಯದಲ್ಲಿ ಉತ್ಪತ್ತಿಯಾಗುವ ಜೇನು ತುಪ್ಪವನ್ನು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿ ಮಾರಾಟ ಮಾಡುವ ಉದ್ದೇಶದಿಂದ “ಝೇಂಕಾರ (JHENKARA)” ಬ್ರಾಂಡ್ ಅಡಿಯಲ್ಲಿ ನೊಂದಾಯಿಸಲ್ಪಟಿದ್ದು, “ಝೇಂಕಾರ (JHENKARA)” ಬ್ರಾಂಡ್ ಹಾಗೂ ಕೊಡಗು ಜೇನಿನ “ಕೂರ್ಗ್ ಹನಿ” ಮಾರಾಟ ಬ್ರಾಂಡ್ ಗಳ ವಿವಿಧ ಕಲಾಕೃತಿಗಳನ್ನು ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು. 3. ಹೂ ಹಾಗೂ ಜೇನು ಹುಳುವಿನ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು. 4. ಗಣರಾಜ್ಯೋತ್ಸವದ ಅಂಗವಾಗಿ ಯೋಧ, ಪಿರಂಗಿ ಹಾಗೂ ರಾಷ್ಟ್ರಧ್ವಜದ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು. ವಿಂಟೇಜ್ ಕಾರ್ ನ ಕಲಾಕೃತಿಯನ್ನು ವಿವಿಧ ಬಣ್ಣದ ಹೂವಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು. 6. Butterfly wings, ಪ್ರವೇಶದಾರ, ಪ್ರಾಣಿ ಮುಖದ ಕಲಾಕೃತಿಯನ್ನು ಹೂವುಗಳಿಂದ ನಿರ್ಮಾಣ ಮಾಡಲಾಗುವುದು. 7. ಮಕ್ಕಳಿಗೆ ಮನರಂಜನೆ ನೀಡುವಂತಹ ಬಾರ್ಬಿ ಡಾಲ್, ಡೊರೆಮಾನ್, ಮೋಟು ಪಟು. ಕಲಾಕೃತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಫೋಟೋ ಫ್ರೆಮ್, Selfy Zone ಮಾದರಿಯನ್ನು ನಿರ್ಮಿಸಲಾಗುವುದು. 8. ವಿವಿಧ ಕ್ಷೇತ್ರಗಳ ಗಣ್ಯರು ಗಳ ಕಲಾಕೃತಿಗಳನ್ನು ಹಣ್ಣು/ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು. ವಿವಿಧ ಅಲಂಕಾರಿಕ ಗಿಡಗಳು ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡನೆಯ ಪ್ರದರ್ಶನಗಳನ್ನು ಏರ್ಪಾಡಿಸಲಾಗುವುದು. ಈ ರೀತಿಯಾಗಿ ಹದಿನಾರು ವಿವಿಧ ರೀತಿಯ ಹೂವಿನ ಕಲಾಕೃತಿಗಳನ್ನು ಒಟ್ಟು 8.00 ರಿಂದ 10.00 ಲಕ್ಷ ಸಂಖ್ಯೆಯ ಸೇವಂತಿಗೆ, ಆರ್ಕಿಡ್, ಡೆಸ್ಸಿ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು. ಮುಂದುವರೆದು ಗಾಂಧಿ ಮೈದಾನದಲ್ಲಿ 60 ಸಂಖ್ಯೆಯ ವಿವಿಧ ಇಲಾಖೆಗಳು/ಏಜೆನ್ಸಿಗಳು/ಸಂಸ್ಥೆಗಳು ಮಳಿಗೆಯನ್ನು ನಿರ್ಮಿಸಲಾಗುವುದು ಇದರಲ್ಲಿ 10 ಮಳಿಗೆಯನ್ನು ತೋಟಗಾರಿಕೆ, ಕಾಫಿ ಮಂಡಳಿ, ಕೃಷಿ, ಪಶುಪಾಲನೆ, ಮೀನುಗಾರಿಕೆ, Hopcoms, ಕೈಗಾರಿಕೆ ವಾಣಿಜ್ಯ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಕಾಯ್ದಿರಿಸಲಾಗಿದೆ. 50 ಮಳಿಗೆಯಲ್ಲಿ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ರೈತರು ಬೆಳೆದಿರುವಂತಹ ವಿಶೇಷವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಾಂಬಾರು ಬೆಳೆಗಳ ಪ್ರದರ್ಶಿಕೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಅತ್ಯುತ್ತಮ ಪ್ರದರ್ಶಿಕೆಗಳಿಗೆ ಬಹುಮಾನ ನೀಡಲಾಗುವುದು. ಆಸಕ್ತರು ದಿನಾಂಕ: 23.01.2025 ರಿಂದಲೇ, ತೋಟಗಾರಿಕೆ ಇಲಾಖೆಗೆ ಪ್ರದರ್ಶಿಕೆಗಳನ್ನು ತಂದು ಹೆಸರನ್ನು ನೋಂದಾಯಿಸಿಕೊಳ್ಳುವುದು. ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂ ಜೋಡಣೆ, ಬಿಡಿ ಹೂಗಳ ಜೋಡಣೆ, ಇಕೆಬಾನ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟಿನ ಒಳಭಾಗದಲ್ಲಿ ಆಯೋಜಿಸಲಾಗುವುದು. ಆಸಕ್ತರು ಇಂದಿನಿಂದಲೇ ಅಥವಾ ನೇರವಾಗಿ ದಿನಾಂಕ: 24.01.2025 ಬೆಳಿಗ್ಗೆ 8.00 ಗಂಟೆಗೆ ರಾಜಾಸೀಟು ಉದ್ಯಾನವನದಲ್ಲಿ (ದೂರವಾಣಿ ಸಂಖ್ಯೆ: 9448613355) ಹೆಸರನ್ನು ನೊಂದಾಯಿಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಶಾಲೆಯಿಂದ ಶಾಲಾ ಸಮವಸ್ತ್ರದಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ.