ಮಡಿಕೇರಿ ಜ.24 NEWS DESK : ಕ್ರಾಂತಿಕಾರಿ ಆಲೋಚನೆಗಳ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ್ದ ಅಪ್ರತಿಮ ದೇಶಪ್ರೇಮಿ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಇಡೀ ಬದುಕನ್ನೇ ಸವೆಸಿದ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ದೇಶಪ್ರೇಮ ಮತ್ತು ಸಮರ್ಪಣಾಭಾವವನ್ನು ಸ್ಮರಿಸಬೇಕಿದೆ ಎಂದು ಬಿ.ಜೆ.ಪಿ. ಎಸ್.ಸಿ. ಮೋರ್ಚಾದ ಕೊಡಗು ಜಿಲ್ಲಾಧ್ಯಕ್ಷ ಪಿ.ಎಂ. ರವಿ ಹೇಳಿದರು.“ಪರಾಕ್ರಮ್ ದಿವಸ್” ಅಂಗವಾಗಿ ಮಡಿಕೇರಿ ನಗರದ ವಾರ್ಡ್ ನಂ.6 ರ ಸ್ಥಳೀಯ ರಾಘವೇಂದ್ರ ದೇವಾಲಯದ “ನೇತಾಜಿ ಜಂಕ್ಷನ್” ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ‘ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎಂಬ ಸಂದೇಶದ ಮೂಲಕ ಕೋಟಿ ಕೋಟಿ ಭಾರತೀಯರನ್ನು ಒಂದುಗೂಡಿಸಿದ ಮಹಾನ್ ಚೇತನ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್. ಅವರ ಜನ್ಮದಿನದಂದು ಅವರಿಗೆ ನಮನವನ್ನು ಸಲ್ಲಿಸಿ, ಸ್ವಾತಂತ್ರ ಹೋರಾಟಕ್ಕಾಗಿ ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉದ್ಯಮಿ ಹರೀಶ್ ರೈ, ಜನನಿ ಮಹಿಳಾ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರುಗಳು, ಸದಸ್ಯರು, ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.