ಮಡಿಕೇರಿ NEWS DESK ಜ.24 : ಆದಿಮಸಂಜಾತ ಕೊಡವರನ್ನು ಒಳಗೊಂಡ ಪರಿಪೂರ್ಣ ಮತ್ತು ಅರ್ಥಪೂರ್ಣ ಗಣರಾಜ್ಯಕ್ಕಾಗಿ ಒತ್ತಾಯಿಸಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು 76ನೇ ಗಣರಾಜ್ಯೋತ್ಸವದ ದಿನವಾದ ಜ.26 ರಂದು ಬೆಳಿಗ್ಗೆ 10.30 ಗಂಟೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತವಾಗಿ ಮಂಡಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಸೂಕ್ಷ್ಮಾತಿಸೂಕ್ಷ್ಮ ನಗಣ್ಯ ಸಂಖ್ಯೆಯ ಕೊಡವರ ಗೌರವಾನ್ವಿತ ಗುರಿಗಳು ಮತ್ತು ಶಾಸನ ಬದ್ಧ ಹಕ್ಕೊತ್ತಾಯಗಳ ಅನುಷ್ಠಾನಕ್ಕಾಗಿ ಜಿಲ್ಲಾಡಳಿತ ಮೂಲಕ ಸರಕಾರಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ದೇಶದ ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ವಿಶ್ವರಾಷ್ಟ್ರ ಸಂಸ್ಥೆಯ ಘೋಷಣೆ ಪ್ರಕಾರ ಅಂತರಾಷ್ಟ್ರೀಯ ಕಾನೂನಿನನ್ವಯ ಆದಿಮಸಂಜಾತ ಕೊಡವರಿಗೆ ಮಾನ್ಯತೆ ಮತ್ತು ಸೂಕ್ಷ್ಮಾತಿಸೂಕ್ಷ್ಮ ಕೊಡವ ಬುಡಕಟ್ಟು ಕುಲಕ್ಕೆ ಎಸ್‌ಟಿ ಟ್ಯಾಗ್ ಪರಿಗಣಿತೆಯೊಂದಿಗೆ ಸಿಎನ್‌ಸಿ ಪ್ರತಿಪಾದಿಸಿರುವ ಕೊಡವರ ಭೂಮಿ, ಭಾಷೆ, ಸಂಸ್ಕೃತಿ, ಜನಪದ ಇತ್ಯಾದಿ ಅಶೋತ್ತರಗಳಿಗೆ ರಾಜ್ಯಾಂಗ ಖಾತರಿಯ ಕಾನೂನುಬದ್ಧ ಹಕ್ಕುಗಳನ್ನು ನೀಡಬೇಕೆಂದು ಒತ್ತಾಯಿಸಲಾಗುವುದು.
ಸಂವಿಧಾನದ ವಿಧಿ 32ರ ಅಡಿಯಲ್ಲಿ ಜನರ ಆಶೋತ್ತರಗಳಿಗೆ ಪರಿಹಾರ ಕಂಡುಕೊಳ್ಳುವುದು 6 ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಅದರಂತೆ ಸಾಂವಿಧಾನಿಕ ಕಾರ್ಯವಿಧಾನದ ಮೂಲಕ ಕೊಡವರ ಪರಮೋಚ್ಚ ಆಕಾಂಕ್ಷೆಗಳು ಮತ್ತು ಗೌರವಾನ್ವಿತ ಗುರಿಗಳನ್ನು ಸಾಧಿಸಲು ಈ ಶಾಂತಿಯುತ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಿಎನ್‌ಸಿ ಸ್ವಯಂ ಸೇವಕರು ಹಾಗೂ ಕೊಡವ, ಕೊಡವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.