ಮಡಿಕೇರಿ NEWS DESK ಜ.25 : ಜೀವನದಿ ಕಾವೇರಿ ಉಗಮ ಸ್ಥಾನವಾದ ತಲಕಾವೇರಿ ವ್ಯಾಪ್ತಿಯಲ್ಲಿನ ರಕ್ಷಿತಾರಣ್ಯ, ವನ್ಯಜೀವಿ ಅಭಯಾರಣ್ಯವೆಂದು ಗುರುತಿಸಲ್ಪಟ್ಟ ಪರಿಸರ ಸೂಕ್ಷ್ಮ ವಲಯದಲ್ಲಿ ಪ್ರಭಾವಿ ವ್ಯಕ್ತಿಗೆ ಸೇರಿದ ಸಂಸ್ಥೆಯೊಂದು ರಸ್ತೆ ನಿರ್ಮಾಣದ ಪ್ರಯತ್ನಕ್ಕೆ ಮುಂದಾಗುವ ಆಘಾತಕಾರಿ ಬೆಳವಣಿಗೆ ಕಂಡು ಬಂದಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ಕೊಡಗು ವನ್ಯಜೀವಿ ಸಂರಕ್ಷಣಾ ಸಂಘ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವನ್ಯಜೀವು ಸಂರಕ್ಷಣಾ ಸಂಘದ ಅಧ್ಯಕ್ಷರಾದ ಕೆ.ಎನ್.ಮಾದಪ್ಪ, ಕೇರಳದ ಗಡಿಯಲ್ಲಿ ಬರುವ, ಭಾಗಮಂಡಲ ಗ್ರಾಮ ಪಂಚಾಯ್ತಿಗೆ ಒಳಪಟ್ಟ ಮುಂಡ್ರೋಟ್‌ನಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ಜಾಗಕ್ಕೆ ಸಂಪರ್ಕ ಕಲ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ, ಮುಂಡ್ರೋಟ್‌ನಿಂದ ಸರಿ ಸುಮಾರು 24 ಕಿ.ಮೀ. ರಸ್ತೆಯನ್ನು ತಲಕಾವೇರಿ ರಕ್ಷಿತಾರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡುವ ಪ್ರಯತ್ನಗಳಿಗೆ ಇಳಿದಿರುವುದಾಗಿ ಆರೋಪಿಸಿದರು. ತಲಕಾವೇರಿ ಕ್ಷೇತ್ರಕ್ಕೆ ತೆರಳುವ ಪ್ರವೇಶ ದ್ವಾರದಿಂದ ಬಲ ಬದಿಗಾಗಿ ಅರಣ್ಯ ಇಲಾಖೆಯ ವಾಚರ್‌ಗಳ ಕಾಲು ಹಾದಿ ಇದೆ. ಈ ಹಾದಿಯನ್ನು ರಸ್ತೆಯಾಗಿ ಪರಿವರ್ತಿಸಿಕೊಳ್ಳುವ ಇರಾದೆ ಪ್ರಭಾವಿ ವ್ಯಕ್ತಿಗಳ ಸಂಸ್ಥೆಯದ್ದಾಗಿದೆ. ಇಂತಹ ಪ್ರಯತ್ನ ಕಾವೇರಿಯ ಜಲ ಮೂಲ ಸೇರಿದಂತೆ ಅಲ್ಲಿನ ಪರಿಸರಕ್ಕೆ ಅಪಾರ ಹಾನಿಯನ್ನು ಉಂಟುಮಾಡುವುದರಲ್ಲಿ ಯಾವುದೇ ಸಂದೇಹವೆಲ್ಲವೆಂದು ಆತಂಕ ವ್ಯಕ್ತಪಡಿಸಿದರು. ತಲಕಾವೇರಿ ರಕ್ಷಿತಾರಣ್ಯ ಪ್ರದೇಶ ಅತ್ಯಂತ ದಟ್ಟ ಅರಣ್ಯ ಪ್ರದೇಶವಾಗಿದ್ದು, ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲಟ್ಟಿರುವುದಲ್ಲದೆ, ವನ್ಯಜೀವಿ ಅಭಯಾರಣ್ಯವು ಆಗಿದೆ. ನಿತ್ಯ ಹರಿದ್ವರ್ಣದ ಈ ಭಾಗದ ಅರಣ್ಯದಲ್ಲಿ ಆನೆಗಳ ಕಾರಿಡಾರ್‌ನ್ನು ಗುರುತಿಸಲಾಗಿದ್ದರೆ, ವಿವಿಧ ಜೀವ ಸಂಕುಲಗಳ ಆವಾಸ ಸ್ಥಾನವಾಗಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾದಲ್ಲಿ ಒಟ್ಟು ಪರಿಸರಕ್ಕೆ ಧಕ್ಕೆಯುಂಟಾಗಲಿದೆ ಎಂದರು. ಮುಂಡ್ರೋಟ್ ವಿಭಾಗದಲ್ಲಿ ಪ್ರಭಾವಿ ವ್ಯಕ್ತಿಯ ಸಂಸ್ಥೆ ಖರೀದಿಸಿರುವ ಜಾಗಕ್ಕೆ ಇತರೆ ಸಂಪರ್ಕ ರಸ್ತೆಗಳು ಇವೆ. ಆದರೆ, ತಲಕಾವೇರಿಯ ಮೂಲಕ ಸಮೀಪದ ಹಾದಿಯನ್ನು ಕಂಡು ಕೊಳ್ಳುವ ಪ್ರಯತ್ನ ಅವರದ್ದಾಗಿದೆ. ತಲಕಾವೇರಿ ಅಭಯಾರಣ್ಯದಲ್ಲಿ ರಸ್ತೆಗೆಂದು ಉದ್ದೇಶಿಸಿರುವ ಪ್ರದೇಶ ಅತ್ಯಂತ ಕಡಿದಾದ ಬೆಟ್ಟ ಗುಡ್ಡಗಳನ್ನು ಹೊಂದಿರುವ ಪ್ರದೇಶವಾಗಿರುವುದಲ್ಲದೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ನಡೆಸಿದ ಸರ್ವೇಯಲ್ಲಿ ಭೂ ಕುಸಿತದ ಆತಂಕದ ಪ್ರದೇಶವೆಂದು ಗುರುತಿಸಲಾಗಿದೆಯೆ ಎಂದು ತಿಳಿಸಿದರು. ಇಂತಹ ಸೂಕ್ಷ್ಮ ಪ್ರದೇಶವನ್ನು ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಈಗಾಗಲೆ ಕೊಡಗು ವನ್ಯ ಜೀವಿ ಸಂರಕ್ಷಣಾ ಸಂಘವು ಅರಣ್ಯ ಸಚಿವರು, ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದೆ. ರಸ್ತೆ ನಿರ್ಮಾಣವಾಗಕೂಡದೆನ್ನುವ ನಿಟ್ಟಿನ ನಮ್ಮ ಈ ಪ್ರಯತ್ನಗಳ ನಡುವೆ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಲು ಮುಂದಾದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಕೆ.ಎಸ್.ಮಾದಪ್ಪ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ವನ್ಯ ಜೀವಿ ಸಂರಕ್ಷಣಾ ಸಂಘದ ಮಾಜಿ ಅಧ್ಯಕ್ಷರಾದ ಕೆ.ಎ.ಚಂಗಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಪಿ.ಅಯ್ಯಪ್ಪ ಉಪಸ್ಥಿತರಿದ್ದರು.