ಮೈಸೂರು NEWS DESK ಜ.25 : ಸ್ಕ್ವಾಡ್ರನ್ ಲೀಡರ್ ಎ.ಬಿ.ದೇವಯ್ಯ ಅವರ ಕುರಿತು ತಯಾರಿಸಲಾದ ಬಾಲಿವುಡ್ ಸಿನಿಮಾ ‘SKY FORCE’ ಕುರಿತು ಮೂಲ ಕೃತಿಯ ಲೇಖಕ ಐತಿಚಂಡ ರಮೇಶ್ ಉತ್ತಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಡಗಿನ ಮಹಾಯೋಧರೊಬ್ಬರ ಕುರಿತು ಹಿಂದಿ ಸಿನಿಮಾವೊಂದು, ಅದರಲ್ಲಿಯೂ ಅಕ್ಷಯ್ ಕುಮಾರ್ ನಟನೆ ಮಾಡುವ ಸಿನಿಮಾ ತಯಾರಾಗುತ್ತಿದೆ ಎಂದಾಗ ಹೆಮ್ಮೆಪಟ್ಟಿದ್ದೆ. 2000 ಇಸವಿಯಿಂದ ಸುಮಾರು 10 ವರ್ಷಗಳ ಕಾಲ ಅಜ್ಜಮಾಡ ದೇವಯ್ಯ ಅವರ ಕುರಿತು ಅಧ್ಯಯನ ನಡೆಸಿದ್ದೇನೆ. 1965ರಲ್ಲಿ ಯುದ್ದ ನಡೆದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಸಾಕಷ್ಟು ಮಂದಿ ಸೇನಾಧಿಕಾರಿಗಳು, ಕುಟುಂಬದವರಿಂದ ಮಾಹಿತಿ ಪಡೆದಿದ್ದೇನೆ. ಹಲವು ದಾಖಲೆಗಳನ್ನು ಕಲೆ ಹಾಕಿ ಇಡೀ ದೇಶದಲ್ಲಿಯೇ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ ಕುರಿತು ಬರೆದ ಮೊದಲ ಪುಸ್ತಕ ನನ್ನ `1965ರ ಯುದ್ಧ ಹಾಗೂ ಕೊಡಗಿನ ಮಹಾವೀರ’ ಎಂದು ವಿವರಿಸಿದ್ದಾರೆ. “ಆದರೆ, ಸಿನಿಮಾ ನೋಡಿ ತೀವ್ರ ನಿರಾಸೆಯಾಗಿದೆ. ಸಿನಿಮಾದಲ್ಲಿ ದೇವಯ್ಯ ಅವರ ಹೆಸರನ್ನು ಟಿ.ಕೃಷ್ಣನ್ ವಿಜಯ್ ಎಂದು ಬದಲಾಯಿಸಲಾಗಿದೆ. ಇದು ದೇವಯ್ಯ ಅವರಿಗೆ ಮಾಡರುವ ಅವಮಾನ. ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ನೈಜವಾಗಿಯೇ ಇರಬೇಕು. ಇಡೀ ಸಿನಿಮಾದಲ್ಲಿ ದೇವಯ್ಯ ಕೊಡವ, ಕೊಡಗಿನವರು, ಕರ್ನಾಟಕದವರು ಎನ್ನುವುದು ಇಲ್ಲ. ಕನಿಷ್ಠಪಕ್ಷ ಫೀ.ಮಾ. ಕೆ.ಎಂ.ಕಾರ್ಯಪ್ಪ, ಜ.ತಿಮ್ಮಯ್ಯ ಅವರ ಸಮುದಾಯದವರು, ಕರ್ನಾಟಕದವರು, ಕೊಡಗಿನವರು ಎಂದು ಕೂಡ ತೋರಿಸಿಲ್ಲ. ದೇವಯ್ಯ ಅವರಂತಹ ಮಹಾನ್ ಸೇನಾನಿ. ಯೋಧರನ್ನು ಸೃಷ್ಟಿಸಿದ ಕೊಡವರ ಬಗ್ಗೆ ಒಂದು ಪದವೂ ಇಲ್ಲದಿರುವುದು ನಿರಾಸೆ ತಂದಿದೆ. ಅವರ ಪತ್ನಿಗೆ ಇಬ್ಬರು ಮಕ್ಕಳಿದ್ದರೂ ಒಬ್ಬರೇ ಮಗಳು ಎಂದು ತೋರಿಸಲಾಗಿದೆ’’ ಎಂದು ಆಕ್ಷೇಪಿಸಿದ್ದಾರೆ. “ಈ ಚಿತ್ರಕ್ಕೆ ನನ್ನಿಂದ ಎನ್‌ಒಸಿ ಪಡೆದಿಲ್ಲ. ಈ ಸಿನಿಮಾದ ಮೊದಲ ಶೋವನ್ನು ಬಿಡುಗಡೆಗೆ ಮುನ್ನ ಕುಟುಂಬದವರಿಗೆ, ಲೇಖಕರಿಗೆ, ಪ್ರಕಾಶಕರಿಗೆ ತೋರಿಸಬೇಕಿತ್ತು. ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಇದ್ಯಾವುದನ್ನೂ ಮಾಡದೆ, ಕೊಡಗಿಗೆ, ಕೊಡವರಿಗೆ ಅನ್ಯಾಯ ಮಾಡಲಾಗಿದೆ. ಚತ್ರದ ನಿರ್ದೆಶಕರು ಕೂಡಲೇ ಕ್ಷಮೆ ಕೇಳಬೇಕು’’ ಎಂದು ರಮೇಶ್ ಉತ್ತಪ್ಪ ಆಗ್ರಹಿಸಿದ್ದಾರೆ.