ಮಡಿಕೇರಿ NEWS DESK ಜ.26 : ಗ್ಯಾರಂಟಿ ಯೋಜನೆಗಳ ಮೂಲಕ ಭ್ರಷ್ಟಾಚಾರವಿಲ್ಲದೆ 52 ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ನೇರವಾಗಿ ಜನರಿಗೆ ತಲುಪಿಸುತ್ತಿರುವ ಹೆಗ್ಗಳಿಕೆ ನಮ್ಮದಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು. ಇಂದು ಮಡಿಕೇರಿ ಜಿಲ್ಲೆಯ ಶನಿವಾರಸಂತೆ ತಾಲ್ಲೂಕಿನ ಕೊಡ್ಲಿಪೇಟೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಅಭಿವೃದ್ದಿಗೊಳಿಸಲಾಗಿರುವ ನಂದಿಪುರ ಕೆರೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಆಗಸ್ಟ್ 2023 ತಿಂಗಳಲ್ಲಿ ಈ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ನಮ್ಮ ಇಲಾಖೆಯ ವತಿಯಿಂದ 3.90 ಕೋಟಿ ವೆಚ್ಚದಲ್ಲಿ ನಂದಿಪುರ ಕೆರೆಯನ್ನು ಅಭಿವೃದ್ದಿಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಇಲಾಖೆಯು ಕೆರೆಗಳ ಸೌಂದರ್ಯಿಕರಣ ಮಾಡಿದ ಏಕೈಕ ಕೆರೆ ಇದಾಗಿದೆ. ನಗರ ಪ್ರದೇಶಗಳಲ್ಲಿ ಅಭಿವೃದ್ದಿಗೊಳಿಸುವ ರೀತಿಯಲ್ಲಿ ವಾಕಿಂಗ್ ಟ್ರ‍್ಯಾಕ್, ಮಕ್ಕಳಿಗೆ ಆಟವಾಡುವ ಪ್ರದೇಶಗಳನ್ನು ಅಭಿವೃದ್ದಿಗೊಳಿಸಲಾಗಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು. ಹಿರಿಯ ವಕೀಲರಾದ ಕೊಡ್ಲಿಪೇಟೆಯ ಚಂದ್ರಮೌಳಿಯವರು ಈ ಯೋಜನೆಯನ್ನು ತರಲು ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಅವರ ಪ್ರಯತ್ನದಿಂದಾಗಿ ಹಾಗೂ ಒತ್ತಾಸೆಯಿಂದಾಗಿ ಕೆರೆ ಅಭಿವೃದ್ದಿಗೊಂಡಿದೆ. ಕೊಡ್ಲಿಪೇಟೆಯ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರ ಜನಪರ ಆಡಳಿತವನ್ನು ನೀಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ದೇಶದಲ್ಲೇ ಮಾದರಿಯಾಗಿದೆ. ಯಾವುದೇ ಭ್ರಷ್ಟಾಚರವಿಲ್ಲದೇ 52 ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ನೇರವಾಗಿ ಜನರಿಗೆ ತಲುಪಿಸುತ್ತಿರುವ ಹೆಗ್ಗಳಿಕೆ ನಮ್ಮ ರಾಜ್ಯದ್ದಾಗಿದೆ ಎಂದರು. ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ಅಭಿವೃದ್ದಿಗೊಳಿಸಲಾಗಿರುವ ಕೆರೆಯನ್ನು ಗ್ರಾಮಸ್ಥರು ಸರಿಯಾಗಿ ನಿರ್ವಹಣೆ ಮಾಡಬೇಕು. ಕೆಲವಷ್ಟು ಕಾಮಗಾರಿಗಳು ಬಾಕಿಯಿದ್ದು ಅದರ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ಕೊಡಿಸುವ ಭರವಸೆ ನೀಡಿದರು. ಅಭಿವೃದ್ದಿಗೊಂಡಿರುವ ನಂದಿಪುರ ಕೆರೆಯನ್ನು ಎಲ್ಲರೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅನೈತಿಕ ಚಟುವಟಿಕೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಚಂದ್ರಮೌಳಿ, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷಾದ ಅಪ್ಸರ್ ಬೇಗಂ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.