ಮೈಸೂರು NEWS DESK ಜ.26 : ತರಕಾರಿ ಮತ್ತು ಬೆಲ್ಲದ ಆಸೆಗಾಗಿ ಕಾಡಾನೆಯೊಂದು ಗುಂಡ್ಲುಪೇಟೆಯ ಬಂಡೀಪುರ ರಸ್ತೆಯಲ್ಲಿ ಸಿಕ್ಕ ಸಿಕ್ಕ ವಾಹನಗಳ ಮೇಲೆ ದಾಳಿ ಮಾಡುತ್ತಿದ್ದು, ಸವಾರರು ಆತಂಕಗೊಂಡಿದ್ದಾರೆ. ಪ್ರತಿದಿನ ಈ ಮಾರ್ಗದಲ್ಲಿ ಕಾಣಿಸಿಕೊಳ್ಳುವ ಕಾಡಾನೆ ಲಾರಿಗಳನ್ನು ಅಡ್ಡಗಟ್ಟುತ್ತಿದೆ, ಅಲ್ಲದೆ ಇತರ ವಾಹನಗಳ ಮೇಲೆ ದಾಳಿಗೆ ಮುಂದಾಗುತ್ತಿದೆ. ಆನೆಯನ್ನು ಕಂಡು ಆತಂಕಗೊಂಡ ಬೈಕ್ ಸವಾರರೊಬ್ಬರು ಬೈಕ್ ಬಿಟ್ಟು ಓಡುವ ಸಂದರ್ಭ ಕಾಡಾನೆ ದಾಳಿ ಮಾಡಲು ಯತ್ನಿಸಿದೆ. ಆದರೆ ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಕಾಡಾನೆಯನ್ನು ಕಾಡಿಗಟ್ಟುವ ಅರಣ್ಯ ಇಲಾಖೆಯ ಪ್ರಯತ್ನ ವಿಫಲವಾಗುತ್ತಿದೆ. ವಾಹನಗಳು ಹೆಚ್ಚು ಓಡಾಡುವ ಸಂದರ್ಭ ಕಾರ್ಯಾಚರಣೆ ನಡೆಸಿದರೆ ವಾಹನಗಳ ಮೇಲೆ ದಾಳಿ ಆನೆ ನಡೆಸುವ ಸಾಧ್ಯತೆಗಳಿರುವುದರಿಂದ ಸೂಕ್ತ ಸಮಯಕ್ಕಾಗಿ ಅರಣ್ಯ ಸಿಬ್ಬಂದಿಗಳು ಎದುರು ನೋಡುತ್ತಿದ್ದಾರೆ. ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ-766 ಮೂಲಕ ಹಾದು ಹೋಗಿರುವ ಬಂಡೀಪುರ ರಸ್ತೆಯಲ್ಲಿ ಈ ಒಂಟಿ ಸಲಗ ಉಪಟಳ ನೀಡುತ್ತಿದೆ.