ಸುಂಟಿಕೊಪ್ಪ ಜ.28 NEWS DESK : ಪ್ರತಿಯೊಬ್ಬರೂ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಾಸನಗೊಳಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಾಲಿನಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಮಂಜಿಕೆರೆ ಸಮುದಾಯ ಭವನದಲ್ಲಿ ನಡೆದ ಪುಸ್ತಕ ವಾಚನ ಓದಿ ವಿಮರ್ಶೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದಿನ ದಿನಗಳಲ್ಲಿ ನಾವುಗಳು ಪುಸ್ತಕಗಳನ್ನು ಓದುವ ಹವ್ಯಾಸದಿಂದ ದೂರ ಉಳಿದುಕೊಳ್ಳುತ್ತಿದ್ದೇವೆ ಇದರಿಂದ ನಮ್ಮ ಜ್ಞಾನವು ಕುಂಠಿತಗೊಳ್ಳುತ್ತಿದೆ. ನಾವು ನಿತ್ಯ ಪುಸ್ತಕಗಳನ್ನು ಓದುವುದರಿಂದ ವೈಯಕ್ತಿಕ ಜ್ಞಾನವನ್ನು ಬೆಳೆಸಿಕೊಳ್ಳಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರು ವಿಶ್ರಾಂತಿ ಸಮಯದಲ್ಲಿ ಪುಸ್ತಕಗಳನ್ನು ಓದುವ ಹವ್ಯಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಜನನಿ ತಂಡದ ಸದಸ್ಯೆ ರತ್ನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನ್ಬೈಲ್ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳಾದ ಜನನಿ, ಭೂಮಿಕ, ಕನ್ನಿಕ, ಭಗವತಿ ಹಾಗೂ ದೃತಿ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಖತ್ತಿಜ, ಕಾನ್ಬೈಲ್ ವ್ಯಾಪ್ತಿಯ ಸೇವಾ ಪ್ರತಿನಿಧಿ ಯಶೋಧ ಬಸವರಾಜ್, ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು. ಸದಸ್ಯರಾದ ಅಶ್ವಿನಿ ಸ್ವಾಗತಿಸಿದರು. ಕಾವ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಿಗೆ ಪುಸ್ತಕ ವಿತರಿಸಲಾಯಿತು. ನಂತರ ಪುಸ್ತಕದಲ್ಲಿ ವಾಚಿಸಿದ ವಾಕ್ಯಗಳನ್ನು ಆರಿಸಿಕೊಂಡು ವಿಮರ್ಶೆ ಮಾಡಿಸುವ ಮೂಲಕ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.