ಮಡಿಕೇರಿ ಜ.28 NEWS DESK : ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಸಂಘಟನೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಮ್ಮಾನ್ ಅಭಿಯಾನ ಮತ್ತು ಸಂವಿಧಾನ ಬದಲಿಸಿದ್ದು ಯಾರು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎನ್.ಮಹೇಶ್, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಇಡೀ ಪ್ರಪಂಚ ಕೊಂಡಾಡಿದರೂ ಕಾಂಗ್ರೆಸ್ ಮಾತ್ರ ಅವರನ್ನು ನಿರಂತರವಾಗಿ ಅವಮಾನಿಸಿ ಸಿಗಬೇಕಾದ ಗೌರವವನ್ನು ನೀಡದೆ, ಇದೀಗ ಅವರ ಹೆಸರನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದರು. ಅಂಬೇಡ್ಕರ್ ಅವರಿಗೆ ಅವಮಾನ ಹಾಗೂ ಸನ್ಮಾನ ಮಾಡಿದವರು ಯಾರು, ಸಂವಿಧಾನವನ್ನು ದುರ್ಬಲ ಹಾಗೂ ಸಬಲ ಮಾಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಈ ಅಭಿಯಾನ ಕೈಗೊಳ್ಳಲಾಗಿದೆ ಎಂದರು. ಅಂಬೇಡ್ಕರ್ ಅವರ ಜೀವನದ ಅಂತ್ಯದ ತನಕವೂ ಕಾಂಗ್ರೆಸ್ ನಾಯಕರು ನೋವನ್ನು ಮಾತ್ರ ನೀಡಿದ್ದಾರೆ. ಪ್ರಪಂಚಕ್ಕೆ ಮಾದರಿ ಸಂವಿಧಾನ ನೀಡಿದ ಅಂಬೇಡ್ಕರ್ ನೋವುಂಡರು ದೇಶದ ಉನ್ನತಿ ಹಾಗೂ ಅಭ್ಯುಧಯಕ್ಕಾಗಿ ಅದನ್ನು ಸಹಿಸಿಕೊಂಡು ಕೆಲಸ ಮುಂದುವರೆಸಿದ್ದರು ಎಂದರು. ಅಂಬೇಡ್ಕರ್ ಅವರ ಜನ್ಮಸ್ಥಳ, ಲಂಡನ್ನಲ್ಲಿ ಓದುತ್ತಿದ್ದ ಮನೆ, ದೀಕ್ಷಾ ಭೂಮಿ, ಚ್ರೈತ್ರಭೂಮಿಯನ್ನು ಬಿಜೆಪಿ ಸರಕಾರ ಅಭಿವೃದ್ಧಿ ಪಡಿಸಿದೆ. ಸಮಾನತೆಯ ಪ್ರತಿಮೆ ನಿರ್ಮಿಸಲು ಬಿಜೆಪಿ ಮುಂದಾಗಿದೆ ಎಂದು ತಿಳಿಸಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸಂವಿಧಾನ ಬದಲಾವಣೆಯನ್ನು ಯಾರು ಒಪ್ಪುವುದಿಲ್ಲ. ಈ ರೀತಿ ಚರ್ಚೆ ಬಿಜೆಪಿಗೆ ಹಿನ್ನೆಡೆಯಾಗಿದೆ. ಇದು ಕಾಂಗ್ರೆಸ್ನ ಕುತಂತ್ರ ಎಂದು ಟೀಕಿಸಿದ ಅವರು, ಜನಪ್ರತಿನಿಧಿಗಳಾಗಲು ಸಂವಿಧಾನ ಕಾರಣವಾಗಿದೆ. ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ, ಅವರು ಪ್ರಪಂಚದ ಅಗ್ರಗಣ್ಯ ನಾಯಕ ಎಂದು ಬಣ್ಣಿಸಿದರು. ಮೈಸೂರು ಸಾಮಾಜಿಕ ನ್ಯಾಯ ವೇದಿಕೆ ಕಾರ್ಯದರ್ಶಿ ಎಂ.ಎಸ್.ಪರಮಾನಂದ ಮಾತನಾಡಿ, ಸಾಮಾನ್ಯರು ದೇಶದ ಅತ್ಯುನ್ನತ ಹುದ್ದೆಗೆ ಹೋಗಬೇಕೆಂಬುದು ಅಂಬೇಡ್ಕರ್ ಕನಸಾಗಿತ್ತು ಹೊರತು ಕುಟುಂಬ ರಾಜಕಾರಣವಲ್ಲ ಎಂದರು. ಶ್ರೀ ಮದೆಮಹೇಶ್ವರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಪಿ.ಎಂ.ರವಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ಕೆ.ಚಂದ್ರು, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಅಪ್ರು ರವೀಂದ್ರ, ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ಸಂಚಾಲಕ ವಿ.ಕೆ.ಲೋಕೇಶ್ ಹಾಜರಿದ್ದರು.