



ಕಣಿವೆ ಫೆ.1 NEWS DESK : ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಮಾರಕವಾಗಿರುವ ಮೊಬೈಲ್ ಎಂಬ ಮಾಯಾಪೆಟ್ಟಿಗೆಯನ್ನು ದೂರವಿಟ್ಟು ಪುಸ್ತಕ ಹಿಡಿದು ಅಧ್ಯಯನ ಮಾಡುವ ಮೂಲಕ ಜ್ಞಾನವಂತರಾಗಲು ನಿವೃತ್ತ ಪ್ರಾಂಶುಪಾಲ ಡಾ.ದೇವರಾಜು ಕರೆ ನೀಡಿದರು. ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಜ್ಞಾನಕ್ಕೆ ಇರುವ ಬೆಲೆ ಹಣಕ್ಕಿಲ್ಲ. ಹಣವಂತನನ್ನು ಎಲ್ಲಿಯೂ ಯಾರೂ ಕೂಡ ಸತ್ಕರಿಸಿದ ಉದಾಹರಣೆ ಇಲ್ಲ. ಅದೇ ಕಠಿಣ ಪರಿಶ್ರಮದ ಮೂಲಕ ಜ್ಞಾನವಂತರಾದರೆ ಸಮಾಜವೇ ತನ್ನ ಬಳಿ ಬಂದು ಗೌರವಿಸುತ್ತದೆ ಎಂದರು. ಹಳ್ಳಿಗಾಡಿನಲ್ಲಿ ಪೋಷಕರು ಇಂದಿಗೂ ಕೂಡ ಕಷ್ಟಪಟ್ಟು ಮಕ್ಕಳನ್ನು ಒಳ್ಳೆಯ ಕಾಲೇಜುಗಳಲ್ಲಿ ಓದಿಸುತ್ತಿದ್ದಾರೆ. ಮಕ್ಕಳು ಪೋಷಕರ ಹಣಕಾಸಿನ ಸ್ಥಿತಿಗತಿ ಅರಿಯಬೇಕು. ಹೆತ್ತವರು ಧರಿಸುವ ಹರಿದ ಹಾಗೂ ಹಳೆಯ ಬಟ್ಟೆಗಳ ಬೆವರು ನಿಮ್ಮ ಬದುಕನ್ನು ವರ್ಣರಂಜಿತವಾಗಿಸುತ್ತಿದೆ. ನಿಮ್ಮೊಳಗೆ ಅಡಗಿರುವ ವಿದ್ಯೆ ಹಾಗೂ ಉತ್ತಮ ಸಂಸ್ಕಾರಗಳು ನಿಮ್ಮನ್ನು ಸುಂದರಗೊಳಿಸುತ್ತವೆಯೇ ಹೊರತು, ನೀವು ಧರಿಸುವ ಕಲರ್ ಕಲರ್ ಬಟ್ಟೆಗಳು, ನೀವು ಸುತ್ತಾಡುವ ಬೈಕುಗಳು ಹಾಗೂ ಒಳ್ಳೆಯ ಮೊಬೈಲ್ ಗಳಿಂದಲ್ಲ ಎಂದು ಡಾ.ದೇವರಾಜು ಮಾರ್ಮಿಕವಾಗಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿದ ಹೊಸ ಕಟ್ಟಡದಲ್ಲಿ ಹೊಸದಾಗಿ ಮಾರ್ಪಡಿಸಿದ ಜೀವಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿದ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳ ಪಾಲಿಗೆ ದ್ವಿತೀಯ ಪಿಯುಸಿ ಇಡೀ ಜೀವನದ ದಿಕ್ಕನ್ನೇ ಬದಲಿಸುವ ಪ್ರಮುಖ ಘಟ್ಟವಾಗಿದ್ದು, ಸತತ ಅಧ್ಯಯನ, ಏಕಾಗ್ರತೆ ಹಾಗೂ ನಿರಂತರ ಸಂವಹನಗಳಿಂದ ಗುರಿ ಸಾಧಿಸಬಹುದಾಗಿದೆ. ಆದ್ದರಿಂದ ಪಿಯು ಹಂತವನ್ನು ಬಹಳಷ್ಟು ಜತನ ಹಾಗೂ ಜೋಪಾನವಾಗಿ ಯಶಸ್ವಿ ಪಥದತ್ತ ಕೊಂಡೊಯ್ಯಲು ಕರೆ ನೀಡಿದರು. ಕಾಲೇಜಿನ ಗೌರವ ಪ್ರಾಂಶುಪಾಲ ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ದುಷ್ಚಟ ಹಾಗೂ ದುರಭ್ಯಾಸಗಳಿಂದ ದೂರವಿದ್ದು, ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ಶೈಕ್ಷಣಿಕವಾಗಿ ಸಾಧನೆ ಹೊಂದಬೇಕಿದೆ. ಇತ್ತೀಚಿನ ದಶಕಗಳಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೃಷಿ ಕ್ಷೇತ್ರವನ್ನು ಹೊರತು ಪಡಿಸಿ ಉಳಿದೆಲ್ಲಾ ಕ್ಷೇತ್ರಗಳ ಮೇಲಿನ ಮಮಕಾರದಿಂದಾಗಿ ಕೃಷಿ ಕ್ಷೇತ್ರ ಕೃಷವಾಗುತ್ತಿದೆ. ವಿದ್ಯಾರ್ಥಿಗಳು ಬೇರೆ ಬೇರೆ ರಂಗಗಳ ಸಾಧನೆ ಜೊತೆಗೆ ಕೃಷಿಯನ್ನು ಪ್ರೀತಿಸಬೇಕು. ಕೃಷಿ ರಂಗದಲ್ಲಿ ಹೊಸ ಸಂಶೋಧನೆಗಳಾಗಬೇಕು. ಕೃಷಿಯನ್ನೇ ನಂಬಿರುವ ಹಳ್ಳಿಗಾಡಿನ ಕೃಷಿಕರ ಹಿತಕ್ಕಾಗಿ ಸರ್ಕಾರಗಳು ಹೊಸ ಕೃಷಿ ನೀತಿ ಜಾರಿಗೊಳಿಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಮಾತನಾಡಿ, ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ರಾಷ್ಟ್ರೀಯ ಮಟ್ಟದ ಸಾಧಕರನ್ನು ಸಂಸ್ಥೆಗೆ ಕರೆ ತಂದು ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಕಷ್ಟ ಪಟ್ಟು ಓದಿದಲ್ಲಿ ಹೆತ್ತವರು ಹಾಗೂ ಸಂಸ್ಥೆಗೂ ಹೆಸರು ಬರುತ್ತದೆ ಎಂದರು. ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕಗಳೊಂದಿಗೆ ವೈದ್ಯಕೀಯ ಶಿಕ್ಷಣ ಪೂರೈಸಿ ಕೂಡಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡ ಡಾ.ದೀಪಿಕಾ ಮೂರ್ತಿ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ವಿದ್ಯುತ್ ಅಲಂಕೃತ ವೇದಿಕೆಯಲ್ಲಿ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಿಯು ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಪದವಿ ವಿಭಾಗದ ಪ್ರಾಂಶುಪಾಲೆ ಲಿಖಿತಾ, ಕಾಲೇಜಿನ ಅಧೀಕ್ಷಕ ಎನ್.ಎನ್. ನಂಜಪ್ಪ, ಮಹೇಶ್ ಅಮೀನ್, ಹಿರಿಯ ಉಪನ್ಯಾಸಕರಾದ ವಿಕ್ರಂ, ಮಂಜುನಾಥ್, ನಮಿತಾ, ಸೌಮ್ಯಶ್ರೀ, ಮೇರಿಪ್ರಿಯಾ, ಸ್ವಾಮಿಗೌಡ ಮೊದಲಾದವರಿದ್ದರು. ವಿದ್ಯಾರ್ಥಿನಿ ರಿಲಾ ಸಾರಮ್ಮ ಹಾಗೂ ಕೀರ್ತನಾ ನಿರೂಪಿಸಿದರು. ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಸ್ವಾಗತಿಸಿದರು. ರಶ್ಫಾ ವಂದಿಸಿದರು.