ವಿರಾಜಪೇಟೆ ಫೆ.1 NEWS DESK : ಯುವ ಸಮುದಾಯ ಭವ್ಯವಾದ ರಾಷ್ಟ್ರ ನಿರ್ಮಾಣಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಬಲದಾನಗೈದ ಮಹಾನ್ ಚೇತನಗಳಿಂದ ಪ್ರೇರಣೆಯನ್ನು ಪಡೆಯಬೇಕೆಂದು ಕುಮಾರಿ ಶ್ರೀಶಾ ಅವರು ಕರೆ ನೀಡಿದರು. ಹಿಂದೂ ಜಾಗರಣ ವೇದಿಕೆಯ ವಿರಾಜಪೇಟೆ ತಾಲೂಕು ಘಟಕದ ವತಿಯಿಂದ ನಗರದಲ್ಲಿ ಆಯೋಜಿತ ಯುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಜನಾಂಗದ ಪ್ರೇರಕ ಶಕ್ತಿಯಾಗಿರುವ ಸ್ವಾಮಿ ವಿವೇಕಾನಂದರು ಮತ್ತು ಸೈನಿಕ ಧರ್ಮ ಪರಿಪಾಲನೆ ಮಾಡಿ ರಾಷ್ಟ್ರಕ್ಕಾಗಿ ಬಲಿದಾನಗೈದ ಸುಭಾಷ್ ಚಂದ್ರ ಬೋಸ್‍ರ ಆದರ್ಶಗಳನ್ನು ಪರಿಪಾಲಿಸಿದಾಗ ಮಾತ್ರ ಸುಭದ್ರ ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಸಾಕಾರಗೊಳ್ಳುತ್ತದೆಂದರು. ಅಮ್ಮತ್ತಿಯ ಕಾಫಿ ಬೆಳೆಗಾರರಾದ ಕೆ.ಸಿ.ಪೂಣಚ್ಚ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಬದುಕನ್ನು ಯುವ ಸಮೂº ತಿಳಿಯುವಂತಾಗಬೇಕು. ಪ್ರಸ್ತುತ ಯುವ ಸಮಾಜವು ಮಾದಕ ದ್ರವ್ಯಗಳ ವ್ಯಸನಿಗಳಾಗಿ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿ, ಮಾದಕ ವಸ್ತುಗಳ ವಿರುದ್ಧ ಹೋರಾಟ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಯುವ ಸಮುದಾಯ ಮುಂದಾಗಬೇಕು ಎಂದರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲ್ಲೂಕು ಸಂಯೋಜಕ್ ರವೀಂದ್ರ ಪೂಜಾರಿ, ಟಿ.ಬಿ. ವಿಜು, ತಾಲ್ಲೂಕು ಸಹ ಸಂಯೋಜಕ್ ಅಮ್ಮಣಿಚಂಡ ರೋಹಿತ್, ಬಿ.ಬಿ. ಸಜೀವ ಸಹ ಸಂಯೋಜಕ್ ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಯುವ ಪ್ರಮುಖ್ ಸುನಿಲ್ ಮಾದಾಪುರ ಸ್ವಾಗತಿಸಿ ವಂದಿಸಿದರು.ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಪ್ರಮುಖರಾದ ಅನಿಲ್ ಅಮ್ಮತ್ತಿ, ಯೋಗೇಶ್, ಗಣೇಶ್ ಬಿಟ್ಟಂಗಾಲ ಮತ್ತು ತಾಲ್ಲೂಕಿನ ವಿವಿಧೆಡೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬೈಕ್ ಜಾಥಾ :: ಕಾರ್ಯಕ್ರಮದ ಅಂಗವಾಗಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ನಗರದಲ್ಲಿ ಬೈಕ್ ಜಾಥಾ ನಡೆಯಿತು.
ವರದಿ : ಕಿಶೋರ್ ಕುಮಾರ್ ಶೆಟ್ಟಿ