ಮಡಿಕೇರಿ NEWS DESK ಫೆ.1 : ಪ್ರತಿಯೊಂದು ವರ್ಗದ ಜನರಿಗೆ ತೃಪ್ತಿ ನೀಡಬಲ್ಲ ಮತ್ತು ಸ್ವಾವಲಂಬಿ ಭಾರತಕ್ಕೆ ಪೂರಕವಾಗಬಲ್ಲ ಅಂಶಗಳನ್ನು ಹೊಂದಿರುವ ಬಜೆಟ್ ನ್ನು ಕೇಂದ್ರ ಸರಕಾರ ಇಂದು ಮಂಡಿಸಿದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ತಿಳಿಸಿದ್ದಾರೆ. ಕಳೆದ ವರ್ಷ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಪರಿಸರ ಸಚಿವಾಲಯಕ್ಕೆ 3,412.82 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದು, 2024-25ರಲ್ಲಿ 3,125.96 ಕೋಟಿ ರೂ. ಮೀಸಲಿರಿಸಿದ್ದು, ಶೇ.9 ರಷ್ಟು ಹೆಚ್ಚಾಗಿದೆ. ಇದು ಹಸಿರ ಪರಿಸರವನ್ನು ಹೊಂದಿರುವ ಕೊಡಗು ಜಿಲ್ಲೆಗೂ ಸಹಕಾರಿಯಾಗಬಹುದು. 36 ಜೀವ ರಕ್ಷಕ ಔಷಧಗಳ ಸೀಮಾ ಸುಂಕ ಸಂಪೂರ್ಣ ರದ್ದು ಮಾಡಿದ್ದು, ಅಗ್ಗದ ದರದಲ್ಲಿ ಔಷಧ ಸಿಗುವಂತೆ ಮಾಡಿ, ಜನಸಾಮಾನ್ಯರ ಹಿತ ಕಾಯಲಾಗಿದೆ. ಕಳೆದ ಬಾರಿ ಕರ್ನಾಟಕಕ್ಕೆ ರೈಲ್ವೆ ಬಜೆಟ್ ನಲ್ಲಿ ರೂ.7,559 ಕೋಟಿ ನೀಡಲಾಗಿತ್ತು. ಈ ಬಾರಿ ರೂ.7564 ಕೋಟಿ ನೀಡಲಾಗಿದೆ. ಇದರಿಂದ ಕುಶಾಲನಗರದ ವರೆಗಿನ ರೈಲ್ವೆ ಮಾರ್ಗದ ಯೋಜನೆಗೂ ಸಹಾಯವಾಗಬಹುದು. ತೆರಿಗೆ ವಿನಾಯಿತಿಯನ್ನು ರೂ.12 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ, ಸ್ವದೇಶಿ ಬಟ್ಟೆಗಳು, ಟಿವಿ, ಮೊಬೈಲ್, ಇ-ವಾಹನ, ಮೆಡಿಕಲ್ ಉಪಕರಣಗಳ ಬೆಲೆ ಕಡಿಮೆ ಮಾಡಲಾಗಿದೆ. ಇದು ಜನಸಾಮಾನ್ಯರಿಗೆ ಹಾಗೂ ಮಧ್ಯಮವರ್ಗಕ್ಕೆ ಹೆಚ್ಚು ಸಹಕಾರಿಯಾಗಲಿದೆ. ರೈತರಿಂದ ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದವರೆಗಿನ ಪ್ರತಿಯೊಂದು ವಿಭಾಗವನ್ನು ಗಮನದಲ್ಲಿರಿಸಿ ಬಜೆಟ್ ಮಂಡಿಸಲಾಗಿದೆ. ತಾಂತ್ರಿಕತೆ, ಪೌಷ್ಟಿಕಾಂಶ ಮತ್ತು ಆರೋಗ್ಯಕ್ಕೆ ಒತ್ತು ನೀಡಲಾಗಿದೆ. ವಿಶೇಷವಾಗಿ, ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, ಕೃಷಿ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಿದೆ. ಈ ಯೋಜನೆಯಿಂದಲೂ ಕೃಷಿ ಪ್ರಧಾನ ಜಿಲ್ಲೆ ಕೊಡಗಿಗೆ ಸಹಾಯವಾಗಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷ ರೂ. ನಿಂದ 5 ಲಕ್ಷ ರೂ. ಗೆ ಹೆಚ್ಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಯುವಶಕ್ತಿ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಕೇಂದ್ರ-ರಾಜ್ಯ ಸಹಯೋಗಗಳಿಗೆ ಮತ್ತಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಆರೋಗ್ಯ ಸೇವಾ ವಲಯಕ್ಕೆ ಕಾಯಕಲ್ಪ ಒದಗಿಸಲಾಗಿದೆ ಎಂದು ಶ್ಲಾಘಿಸಿದ್ದಾರೆ.










