



ಮಡಿಕೇರಿ ಫೆ.6 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಜಿಲ್ಲಾ ಮಹಿಳಾ ಸಹಾಯವಾಣಿಯ ಸಹಯೋಗದೊಂದಿಗೆ 2024-25ನೇ ಸಾಲಿನ ಮಿಶನ್ ಶಕ್ತಿ ಯೋಜನೆಯಡಿ “ಬೇಟಿ ಬಚವೊ-ಬೇಟಿ ಪಡಾವೊ” ತಾಲ್ಲೂಕು ಮಟ್ಟದ ಕಾರ್ಯಕ್ರಮವು ಸೋಮವಾರಪೇಟೆಯಲ್ಲಿ ನಡೆಯಿತು. ಸೋಮವಾರಪೇಟೆಯ ಸರ್ಕಾರಿ ಪದವಿ ಪೂರ್ವ ಹಾಗೂ ಪ್ರೌಢಶಾಲಾ ಮಕ್ಕಳಿಗೆ ನಡೆದ “ಶಾಲಾ ಮತ್ತು ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಹಕ್ಕು”ಗಳ ಕುರಿತು ನಡೆದ ಸಂವಹನ ಕಾರ್ಯಾಗಾರವನ್ನು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುದೋಳ್ ಉದ್ಘಾಟಿಸಿ, ಮಾತನಾಡಿ ಮಕ್ಕಳು ಓದಿನೊಂದಿಗೆ ಕ್ರೀಯಾಶೀಲಾತ್ಮಕ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಹಾಗೂ ಚಟುವಟಿಕೆಯಿಂದ ಕೂಡಿರಬೇಕು. ಓದಿಗೆ ಮಹತ್ವವನ್ನು ಕೊಡಬೇಕು ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್.ಕೇಶಿನಿ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ, ಗರ್ಭದಲ್ಲಿರುವ ಮಗುವಿಗೆ ಸಾಮಾಜಿಕ ದೋರಣೆ, ಮಕ್ಕಳ ರಕ್ಷಣೆ, ಬಾಲ್ಯವಿವಾಹದ ಕುರಿತು ಮಾಹಿತಿ ನೀಡಿದರು. ಗರ್ಭದಲ್ಲಿರುವ ಮಗುವಿನಿಂದ 18 ವರ್ಷ ತುಂಬುವವರೆಗೂ ಮಕ್ಕಳಿಗೆ ಬದುಕುವ ಹಕ್ಕಿದೆ. ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದು ಅಪರಾದ. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಕೂಡದು ಸೂಕ್ತ ರೀತಿಯಲ್ಲಿ ಮಕ್ಕಳು ಮಾಹಿತಿಯನ್ನರಿತು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸೋಮವಾರಪೇಟೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮುದ್ದು ಮಾದೇವ, ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿದ್ದು, ಹದಿಹರೆಯದ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಏಕಾಗ್ರತೆಯನ್ನು ಬೆಳಸಿಕೊಳ್ಳುವುದು ಅತೀ ಅವಶ್ಯವಾಗಿದೆ. ಆಲೋಚನೆಗಳನ್ನು ಬೇರೆಡೆಗೆ ಆಕರ್ಷಿತರಾಗದೆ ಓದಿನಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು. ಅಲ್ಲದೆ ಇತ್ತೀಚಿಗೆ ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವುಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳ ಕುರಿತಂತೆ ಮಕ್ಕಳಿಗೆ ತಿಳಿಸಿ ಹೇಳಿದರು. ಮಕ್ಕಳ ಸಹಾಯವಾಣಿ-1098 ಹಾಗೂ ತುರ್ತು ಸಹಾಯವಾಣಿ 112 ಕುರಿತಂತೆ ಮಾಹಿತಿ ನೀಡಿದರು. ಮಕ್ಕಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ತುರ್ತು ಸಂದರ್ಭದಲ್ಲಿ ನೆರವನ್ನು ನೀಡಲಾಗುವುದು ಹಾಗೂ ಕಾಲೇಜಿನ, ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಜಾಗ್ರತೆಯಿಂದ ಇರಬೇಕು ಎಂದು ಮಕ್ಕಳಿಗೆ ಧೈರ್ಯ ತುಂಬಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಮಿಷನ್ ಜಿಲ್ಲಾ ಮಿಷನ್ ಸಂಯೋಜಕರಾದ ಬಿ.ಎಸ್.ಮಮತ ಮಾತನಾಡಿ, ಶಾಲಾ ಮತ್ತು ಕಾಲೇಜು ಮಕ್ಕಳಿಗೆ ಸೂಕ್ತವಾದ ಮಾಹಿತಿಯನ್ನು ತಲುಪಲೆಂದೆ ಸರ್ಕಾರ ಹಲವಾರು ಯೋಜನೆಗಳನ್ನು ತಂದಿದ್ದು, ಮಕ್ಕಳು ಮಾಹಿತಿಯನ್ನು ಸೂಕ್ತವಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ, ಪೊಲೀಸ್ ಇಲಾಖೆಯ ಲೊಕೇಶ್, ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಬಸವರಾಜು, ಮಹಿಳಾ ಸಾಂತ್ವನದ ಸಿಬ್ಬಂದಿಗಳಾದ ಶ್ವೇತ ಮತ್ತು ಮನ್ವಿತ ಹಾಗೂ ಪೋಷಣಾ ಅಭಿಯಾನದ ತಾಲ್ಲೂಕು ಸಂಯೋಜಕರಾದ ರಂಜಿತ ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ಮತ್ತು ಕಾಲೇಜಿನ ಮಕ್ಕಳಿಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್. ಕೇಶಿನಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.