ನವದೆಹಲಿ ಫೆ.7 NEWS DESK : ಮೈಸೂರು ಸಮೀಪದ ಸಿದ್ಧಲಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೆಸರೆ ಗ್ರಾಮದಲ್ಲಿ ಅವೈಜ್ಞಾನಿಕ ಘನತ್ಯಾಜ್ಯ ಘಟಕ ನಿರ್ಮಾಣ ಹಾಗೂ ಈ ಪ್ರದೇಶದಲ್ಲಿ ಕೆಲವರು ತ್ಯಾಜ್ಯವನ್ನು ಸುಡುತ್ತಿರುವುದರಿಂದ ವರುಣಾ ನಾಲಾ ಪಿಲ್ಲರ್ ಗಳಿಗೆ ಭಾರಿ ಅನಾಹತವಾಗಲಿದೆ ಕೂಡಲೇ ಇದನ್ನು ತೆರವುಗೊಳಿಸಿ ಪರಿಸರವನ್ನು ಹಾಗೂ ಜನರನ್ನು ರಕ್ಷಿಸಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದರು, ಜನರಿಗೆ ಹಾಗೂ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವುದರಿಂದ ಪರಿಸರಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಂಸತ್ತಿನ ಗಮನಕ್ಕೆ ತರಲಾಗುವುದು ಎಂದರು. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸಚಿವರ ಗಮನಕ್ಕೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದೂ ವಿವರಿಸಿದ್ದಾರೆ. ಈ ಪ್ರದೇಶದಲ್ಲಿ ಕೆಲವು ವ್ಯಕ್ತಿಗಳು ಶೆಡ್ ಗಳನ್ನು ಕಟ್ಟಿಕೊಂಡು ತ್ಯಾಜ್ಯವನ್ನು ಸುಡುತ್ತಿದ್ದಾರೆ. ವರುಣಾ ನಾಲೆಯ ಸಮೀಪವೇ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಪಿಲ್ಲರ್ ಗಳಿಗೆ ಭಾರಿ ತೊಂದರೆ ಆಗುವ ಸಂಭವವಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಲೇ ಸಮಸ್ಯೆ ಬೃಹದಾಕಾರಾವಾಗಿ ಬೆಳೆದಿದೆ ಎಂದು ಆರೋಪಿಸಿದ್ದಾರೆ. ಮೈಸೂರು ಮಹಾ ನಗರ ಪಾಲಿಕೆಯು ಮೈಸೂರು ಸಮೀಪದ ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಬಾ ಹೋಬಳಿ ಹಳೆ ಕೆಸರೆ ಗ್ರಾಮದಲ್ಲಿ ಘನ ತ್ಯಾಜ್ಯ ನಿರ್ವಹಣೆ ಘಟಕವನ್ನು ಸ್ಥಾಪಿಸಿತ್ತು. ಆದರೆ ಇದರ ನಿರ್ಮಾಣ ಸಂದರ್ಭದಲ್ಲಿ ಕಾನೂನು ಬದ್ಧ ರೀತಿಯಲ್ಲಿ ಅನುಮತಿಗಳನ್ನು ಪಡೆದುಕೊಂಡಿಲ್ಲ. ಯಾವುದೇ ನೀತಿ ನಿಯಮಗಳನ್ನು ಪಾಲಿಸಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ನೀತಿ ನಿಯಮಗಳನ್ನು ಪಾಲಿಸದೇ ಘನ ತ್ಯಾಜ್ಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಯದುವೀರ್ ಹೇಳಿದ್ದಾರೆ.
ಕಾನೂನು ಉಲ್ಲಂಘನೆ :: ಘನತ್ಯಾಜ್ಯ ನಿರ್ಮಾಣಕ್ಕೆ ಪಡೆಯಬೇಕಾಗಿದ್ದ ಕಾನೂನುರೀತ್ಯ ಅನುಮತಿಗಳನ್ನು ಪಡೆದಿಲ್ಲ. ಅತ್ಯಂತ ಅವೈಜ್ಞಾನಿಕ ರೀತಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಸುತ್ತಮುತ್ತಲ ಹಳ್ಳಿಗಳಲ್ಲಿರುವ ಸಾವಿರಾರು ಜನರು ಇದರಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ತ್ಯಾಜ್ಯದಿಂದ ಹೊರಹೊಮ್ಮುತ್ತಿರುವ ದುರ್ವಾಸನೆಯಿಂದ ಸುತ್ತಮುತ್ತಲ ಗ್ರಾಮದ ಸಾವಿರಾರು ಮಂದಿ ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರು ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಯಾವುದನ್ನೂ ಪಾಲಿಸದೇ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಿರುವುದು ಅಕ್ಷಮ್ಯ. ಇದರಿಂದ ಪರಿಸರಕ್ಕೂ ಹಾಗೂ ಜನರಿಗೂ ತೊಂದರೆ ಆಗುತ್ತಿದೆ ಎಂದು ಯದುವೀರ್ ಹೇಳಿದ್ದಾರೆ.
ಪ್ರತಿಭಟನೆ ಮಾಡಿದರೂ ಸ್ಪಂದಿಸಿಲ್ಲ :: ಇಲ್ಲಿನ ಹಲವಾರು ಗ್ರಾಮಗಳ ಸಾವಿರಾರು ಮಂದಿ ಪ್ರತಿಭಟನೆ ನಡೆಸಿ, ಸಂಬಂಧಪಟ್ಟವರಿಗೆ ಮನವಿಗಳನ್ನು ಸಲ್ಲಿಸಿದರೂ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬಂದಿದೆ. ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರದ ಈ ನಿರ್ಲಕ್ಷ್ಯ ಸರಿಯಲ್ಲ. ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರದಿಂದ ಆಗಿರುವ ಸಮಸ್ಯೆಯನ್ನು ಕೇಂದ್ರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಗಮನಕ್ಕೆ ತರುತ್ತೇನೆ. ಈ ವಿಷಯವನ್ನು ಅತ್ಯಂತ ತ್ವರಿತವಾಗಿ ಗಮನಹರಿಸಬೇಕಾಗಿದೆ. ಘನತ್ಯಾಜ್ಯ ಘಟಕವನ್ನು ತೆರವುಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ. ಈ ಜಾಗದ ಬಳಿಯೇ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಜಾಗವಿದ್ದು, ಇಲ್ಲಿಯೂ ಅವೈಜ್ಞಾನಿಕವಾಗಿ ತ್ಯಾಜ್ಯವನ್ನು ಸುಡಲಾಗುತ್ತಿದೆ. ಈ ಅವೈಜ್ಞಾನಿಕ ಘಟಕಗಳನ್ನು ಹಾಗೂ ಇಲ್ಲಿ ತಲೆ ಎತ್ತಿರುವ ಅಕ್ರಮ ಶೆಡ್ಗಳನ್ನು ಕೂಡಲೇ ತೆರವುಗೊಳಿಸಬೇಕು. ನಮ್ಮ ಮೈಸೂರಿನ ಸಿದ್ದಲಿಂಗಪುರ ಕಸಬಾ ಹೋಬಳಿಯ ಕೆಸರೆ ಗ್ರಾಮ ಹಾಗೂ ಸುತ್ತಮುತ್ತಲ ಜನರನ್ನು ರಕ್ಷಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.












