



ವಿರಾಜಪೇಟೆ ಫೆ.8 NEWS DESK : ನಗರದ ಮೂಲಸೌಲಭ್ಯಕ್ಕೆ ಒತ್ತು ನಿಡುವುದಕ್ಕೆ ಬದಲಾಗಿ ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಹಣವನ್ನು ವಿನಾಕಾರಣ ಪೋಲು ಮಾಡಲಾಗುತ್ತಿದೆಯೆಂದು ವಿರಾಜಪೇಟೆ ನಾಗರಿಕ ಸಮಿತಿ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಸಮಿತಿ ವಿರಾಜಪೇಟೆ ಸಂಚಾಲಕ ಡಾ.ಇ.ಆರ್.ದುರ್ಗಾಪ್ರಸಾದ್, ಸರ್ಕಾರಿ ಕೆರೆಗಳ ಸುತ್ತಮುತ್ತಲಿನ 30ಮೀ. ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ಕಾಮಗಾರಿಗಳು ಮತ್ತು ಇನ್ನಿತರ ಚಟುವಟಿಕೆಗಳಿಗೆ ಅವಕಾಶ ಇಲ್ಲದಿರುವಾಗ, ಪುರಸಭಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದಾಗಿ ಅವರು ತಿಳಿಸಿದರು. ಸರ್ಕಾರವು ಸಾರ್ವಜನಿಕರ ತೆರಿಗೆ ಹಣದಿಂದ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸುತ್ತದೆ, ಆದರೆ ಸ್ಥಳೀಯವಾಗಿ ನಾಗರಿಕರಿಗೆ ಅನುಕೂಲವಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಇನ್ನಿತರ ಮೂಲಭೂತ ಸಮಸ್ಯೆಗಳಿದ್ದರು, ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ಹಣ ಬಳಸುವುದು ಎಷ್ಟು ಸರಿಯೆಂದು ಪ್ರಶ್ನಿಸಿದರು. ವಿರಾಜಪೇಟೆ ನಗರದಲ್ಲಿ ಸರ್ಕಾರದ ವ್ಯಾಪ್ತಿಗೆ ಒಳಪಡುವ ಗೌರಿ ಕೆರೆ ಮತ್ತು ಛತ್ರಕೆರೆಗಳಿವೆ. ಇವುಗಳನ್ನು ಸುಂದರಗೊಳಿಸಲು ಮತ್ತು ಜೈನರಬೀದಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಒಟ್ಟು 5.79 ಕೋಟಿ ಕ್ರಿಯಾಯೋಜನೆ ತಯಾರಿಸಿ ಇದೀಗ ಕಾಮಗಾರಿಗಳು ಪ್ರಗತಿಯಲ್ಲಿದೆ. ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಕೆರೆಗಳ ಸುತ್ತಲು ಪಾದಚಾರಿಗಳಿಗೆ ಸಂಚರಿಸಲು ನಡೆಯುವ ಪಥ, ರಂಗಮಂದಿರ ಮತ್ತು ಶೌಚಾಲಯ ನಿರ್ಮಾಣಗಳು ಕಿಯಾಯೋಜನೆಯಲ್ಲಿರುವುದಾಗಿ ತಿಳಿಸಿದರು. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2014 ರ ಅನ್ವಯ ಕೆರೆಗಳ ಸುತ್ತಮುತ್ತಲಿನಲ್ಲಿ ಯಾವುದೇ ಕಾಮಗಾರಿಗಳು ನಡೆಸುವಂತಿಲ್ಲ ಎಂದು ಆದೇಶವಿದ್ದರು, ಅವುಗಳನ್ನು ಮೀರಿ ಹಣ ವಿನಿಯೋಗ ಮಾಡಲಾಗುತ್ತಿದೆ. ಜನಸಾಮಾನ್ಯರ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಇನ್ನೂ ಸಾಧ್ಯವಾಗದಿರುವಾಗ ಈ ಉದ್ಯಾನವನಗಳ ಹೆಸರಿನಲ್ಲಿ ಇಷ್ಟೊಂದು ಮೊತ್ತವನ್ನು ಪೋಲುಮಾಡುವುದರ ಔಚಿತ್ಯವನ್ನು ಸಾರ್ವಜನಿಕರು ಪ್ರಶ್ನೆಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಾಮಾಜಿಕ ಕಾರ್ಯಕರ್ತರಾದ ಮಾಳೇಟಿರ ಎಸ್.ಕಾಳಯ್ಯ ಗೌರಿಕೆರೆ ಮತ್ತು ಛತ್ರಕೆರೆ ಅಭಿವೃದ್ಧಿಗೆ ಹಣ ಬಳಕೆ ಮಾಡಲಾಗುತ್ತಿದೆ. ಕೆರೆಗಳ ಸಂರಕ್ಷಣೆಗಾಗಿ ಸಂಬಂಧಿಸಿದ ಪ್ರಾಧಿಕಾರ, ಇಲಾಖೆಗಳಿಗೆ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ನ್ಯಾಯಯುತವಾಗಿಯೇ ಕಾನೂನು ಅಡಿಯಲ್ಲಿ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆಯೇ ಎಂದು ಜಿಲ್ಲಾಧಿಕಾರಿಗಳು, ನಿರ್ಮಿತಿ ಕೇಂದ್ರ, ನಗರ ಭೂಸಾರಿಗೆ ನಿರ್ದೇಶನಾಲಯ, ಕಂದಾಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಿಗೆ ಪತ್ರಬರೆಯಲಾಗಿದ್ದು, ಇಲಾಖೆಗಳಿಂದ ಉತ್ತರ ಲಭ್ಯತೆಯ ಮೇರೆಗೆ ಮುಂದಿನ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು. ಗೋಷ್ಠಿಯಲ್ಲಿ ವಿರಾಜಪೇಟೆ ನಾಗರಿಕ ಸಮಿತಿಯ ಸದಸ್ಯರಾದ ಎನ್.ಕೆ.ಶರೀಫ್, ಪಿ.ಕೆ.ಅಬ್ದುಲ್ ರೆಹಮಾನ್ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ