ಮೈಸೂರು ಫೆ.8 NEWS DESK : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದೆ. ಇದರೊಂದಿಗೆ ಎರಡೂವರೆ ದಶಕಗಳ ಬಳಿಕ ದಿಲ್ಲಿ ಗದ್ದುಗೆ ಮೇಲೆ ಕಮಲ ಅರಳಿದೆ. ಈ ಬಾರಿಯ ನವದೆಹಲಿ ಚುನಾವಣೆಗೂ ಮತ್ತು ಮೈಸೂರಿಗೂ ಅವಿನಾಭಾವ ಸಂಬಂಧ ಕೂಡ ಇದೆ. ಏಕೆಂದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸಿದ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಯದುವೀರ್ ಒಡೆಯರ್ ಅವರು ಕಳೆದ ವಾರ ನವದೆಹಲಿಯಲ್ಲಿ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ತೆರಳಿದ ಸಂದರ್ಭದಲ್ಲಿ ಪಕ್ಷದ ಪರ ಪ್ರಚಾರ ನಡೆಸಿದ್ದರು.
ಫೆಬ್ರವರಿ ಎರಡರಂದು ಪ್ರಚಾರ :: ನವದೆಹಲಿಯ ಪ್ರತಿಷ್ಠಿತ ರೊಹ್ತಾಸ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಜಿತೇಂದ್ರ ಮಹಾಜನ್ ಅವರ ಪರ ಪ್ರಚಾರ ನಡೆಸಿದ್ದರು. ಈ ವಿಧಾನಸಭೆ ಮತಕ್ಷೇತ್ರದ ಅಶೋಕ ಮಂಡಲದಲ್ಲಿ ಯದುವೀರ್ ಕಳೆದ ಫೆಬ್ರವರಿ ಎರಡರಂದು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದ್ದರು. ಈ ಮತ ಎಣಿಕೆಯಲ್ಲಿ ಜಿತೇಂದ್ರ ಮಹಾಜನ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಜಿತೇಂದ್ರ ಮಹಾಜನ್ 82 ಸಾವಿರಕ್ಕೂ ಹೆಚ್ಚು ಮತಗಳನ್ನು ಸಂಪಾದಿಸಿದ್ದಾರೆ. ಈ ಕ್ಷೇತ್ರದಲ್ಲಿ ಮಹಾಜನ್ ಸಮೀಪ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಸರಿತಾ ಸಿಂಗ್ 54 ಸಾವಿರಕ್ಕೂ ಹೆಚ್ಚು ಮತಗಳನ್ನು ಮಾತ್ರ ಪಡೆದು ಸೋಲನುಭವಿಸಿದ್ದಾರೆ. ಮೈಸೂರು ಸಂಸದರು ಬಿಜೆಪಿ ಪರವಾಗಿ ನವದೆಹಲಿಯಲ್ಲಿ ನಡೆಸಿದ ಪ್ರಚಾರ ಅತ್ಯಂತ ಯಶಸ್ವಿಯಾಗಿದೆ.
ಬಿಜೆಪಿ ಪರ ನಿಂತ “ಆಮ್ ಆದ್ಮಿ :: ನವದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಅಭೂತಪೂರ್ವ ಗೆಲುವು ಸಾಧಿಸಿರುವುದು ನಿಜಕ್ಕೂ ಖುಷಿ ತಂದಿದೆ. ಸುಮಾರು ಎರಡೂವರೆ ದಶಕಗಳ ಬಳಿಕ ನಮ್ಮ ಪಕ್ಷ ಈಗ ಅಧಿಕಾರದ ಗದ್ದುಗೆ ಹಿಡಿದಿದೆ. ಇದಕ್ಕೆ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಈ ಬಾರಿ ನಾನು ಮತ ಪ್ರಚಾರ ನಡೆಸಿದ ಸಂದರ್ಭದಲ್ಲಿ ಕೆಲವು ಗಮನಾರ್ಹ ವಿಷಯಗಳು ನನಗೆ ಮನವರಿಕೆಯಾಯಿತು. ನವದೆಹಲಿಯಲ್ಲಿ ಮಧ್ಯಮ ವರ್ಗದವರು ಸಂಪೂರ್ಣವಾಗಿ ಬಿಜೆಪಿ ಪರವಾಗಿ ದನಿ ಎತ್ತುತ್ತಿರುವುದರಿಂದು ಕಂಡುಬಂದಿತ್ತು. ನಿಜ ಹೇಳಬೇಕೆಂದರೆ “ಆಮ್ ಆದ್ಮಿ”ಗಳು ಬಿಜೆಪಿ ಪರವಾಗಿ ನಿಂತಿದ್ದರಿಂದಲೇ ಬಹುಮತ ದಕ್ಕಲು ಸಹಕಾರಿಯಾಯಿತು ಎಂದು ತಿಳಿಸಿದ್ದಾರೆ. ಇದಲ್ಲದೇ ಎಲ್ಲ ಕೋಮಿನವರು ಕಮಲ ಪಕ್ಷದ ಪರ ಕೈ ಎತ್ತಿದ್ದಾರೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತ ಹಾಗೂ ಬಿಜೆಪಿ ಪರವಾಗಿ ದೇಶದಲ್ಲಿ ಇರುವ ವಿಶ್ವಾಸವೇ ನಮ್ಮ ಜಯಭೇರಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.












