



ಮಡಿಕೇರಿ NEWS DESK ಫೆ.16 : ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಮಹಿಳೆಯರು ಎದುರಿಸುವ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ “ಮಹಿಳಾ ಆರೋಗ್ಯ ಶಿಬಿರ”ವನ್ನು ಆಯೋಜಿಸಲಾಗಿತ್ತು.
ನಗರದ ಹರಿಹರ ಸರ್ವಿಸ್ ಸ್ಟೇಷನ್ ನ ಆವರಣದಲ್ಲಿ ನಡೆದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಹಿಂದೂ ಮಲಯಾಳಿ ಸಂಘದ ಗೌರವ ಸಲಹೆಗಾರ ಟಿ.ಆರ್.ವಾಸುದೇವ್, ಮನುಷ್ಯನಿಗೆ ಆರೋಗ್ಯವೊಂದಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಮಹಿಳೆಯರ ಆರೋಗ್ಯದ ಮೇಲೆ ಕಾಳಜಿ ಇಟ್ಟು ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ. ಈ ರೀತಿಯ ಉಪಯುಕ್ತ ಶಿಬಿರಗಳು ಮತ್ತು ಸಮಾಜಮುಖಿ ಕಾರ್ಯಗಳು ಇನ್ನು ಮುಂದೆಯೂ ನಡೆಯಲಿ ಎಂದು ಕರೆ ನೀಡಿದರು. ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಮಮತಾ ಎಸ್. ಅವರು ಮಾತನಾಡಿ ಮಹಿಳೆಯರ ಆರೋಗ್ಯ ಸಮಸ್ಯೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಡಾ.ಮಂದಿರಾ ಹಾಗೂ ಡಾ.ಸಿಲಾನ ಶಿಬಿರದಲ್ಲಿ ಭಾಗಿಯಾಗಿದ್ದರು. ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಧರ್ಮೇಂದ್ರ ಕೆ.ವಿ, ಗೌರವ ಸಲಹೆಗಾರ ಟಿ.ಆರ್.ವಾಸುದೇವ್ ಹಾಗೂ ಸಲಹೆಗಾರ ಪಿ.ಟಿ.ಉಣ್ಣಿಕೃಷ್ಣನ್ ಶಿಬಿರವನ್ನು ಉದ್ಘಾಟಿಸಿದರು. ಸಂಘದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅಂಜಲಿ ಅಶೋಕ್ ನಿರೂಪಿಸಿ, ಶೈನಿ ಪ್ರಸನ್ನ ಪ್ರಾರ್ಥಿಸಿ, ಅನು ಅನೀಶ್ ಸ್ವಾಗತಿಸಿ, ಲೇಖಾ ಪ್ರಮೋದ್ ವಂದಿಸಿದರು. ಹಿಂದೂ ಮಲಯಾಳಿ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಹೆಚ್.ಪಿ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ಟಿ.ಆರ್, ಪ್ರಚಾರ ಸಮಿತಿ ಸಂಚಾಲಕ ರವಿ ಅಪ್ಪು ಕುಟ್ಟನ್, ನಿರ್ದೇಶಕರುಗಳಾದ ಓ.ಎನ್.ಬಾಬು, ಉಣ್ಣಿ (ಪ್ರಕಾಶ್), ಹರೀಶ್ ಕೆ.ಎ ಹಾಗೂ ಪ್ರಭಾಕರ ಟಿ.ಬಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಶಿಬಿರದ ಲಾಭ ಪಡೆದುಕೊಂಡರು.