

ಮಡಿಕೇರಿ NEWS DESK ಫೆ.16 : ವಾಹನ, ಚಿನ್ನಾಭರಣ ಮತ್ತಿತರ ವಸ್ತುಗಳ ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕಕ್ಕಬ್ಬೆ ನಾಲಡಿ ಗ್ರಾಮದ ಕೆ.ಸಿ.ಅಶೋಕ(35), ಸೋಮವಾರಪೇಟೆಯ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿ ನಿವಾಸಿ ಕೆ.ಪಿ.ಕೀರ್ತಿ(25) ಹಾಗೂ ಸೋಮವಾರಪೇಟೆಯ ರೇಂಜರ್ ಬ್ಲಾಕ್ ನ ರಿಯಾಜ್ ಸಾಬು(26) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಬಳಿಯಿಂದ ಕಳ್ಳತನ ಮಾಡಿದ ಸಿಸಿಟಿವಿ ಡಿವಿಆರ್, ಖಜಾನೆ ಬಾಕ್ಸ್, ರೂ.930 ಮೌಲ್ಯದ ಸ್ಟಾಂಪ್ ಗಳು, ಒಂದು ಮಾರುತಿ ಓಮ್ನಿ, ಎರಡು ದ್ವಿಚಕ್ರ ವಾಹನಗಳು, ಒಂದು ಮರ ಕುಯ್ಯುವ ಯಂತ್ರ, ಒಂದು ಏರ್ ಗನ್, 200 ಕೆ.ಜಿ ಕಾಫಿ, 250 ಕೆ.ಜಿ ಕಾಳು ಮೆಣಸು, 30 ಗ್ರಾಂ ಚಿನ್ನ ಮತ್ತು 229 ಗ್ರಾಂ ಬೆಳ್ಳಿಯನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ::: ಪ್ರಕರಣಗಳು ::: ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024 ನವೆಂಬರ್ 30 ರಂದು ಬಿಟ್ಟಂಗಾಲ ಗ್ರಾಮದ ಅಂಚೆ ಕಛೇರಿಯ ಬಾಗಿಲು ಮುರಿದು ಖಜಾನೆ ಬಾಕ್ಸ್, ಸ್ಟಾಂಪ್‌ಗಳು, ಅಂಚೆ ಪಾಸ್ ಪುಸ್ತಕಗಳು ಮತ್ತು ಸಿಸಿಟಿವಿಯ ಡಿವಿಆರ್ ಅನ್ನು ಕಳವು ಮಾಡಿರುವ ಕುರಿತು ಹಾಗೂ ಬಿಟ್ಟಂಗಾಲ ಗ್ರಾಮದ ನಿವಾಸಿ ಮಾಚಯ್ಯ ಎಂಬುವವರ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಮಾರುತಿ ಓಮಿನಿ ವಾಹನ ಕಳ್ಳತನವಾಗಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಗೋಣಿಕೊಪ್ಪ, ಭಾಗಮಂಡಲ, ಮಡಿಕೇರಿ ಗ್ರಾಮಾಂತರ ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನ-ಬೆಳ್ಳಿ ಆಭರಣಗಳು, ದ್ವಿಚಕ್ರ ವಾಹನ ಹಾಗೂ ಮರ ಕುಯ್ಯುವ ಯಂತ್ರವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ಸಿಪಿಐ ಅನೂಪ್ ಮಾದಪ್ಪ, ಪಿಎಸ್‌ಐಗಳಾದ ಲತಾ, ವಾಣಿಶ್ರೀ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.