


ಸುಂಟಿಕೊಪ್ಪ NEWS DESK ಫೆ.16: ಇಂದಿನ ಹದಿಹರೆಯದ ಮಕ್ಕಳು ದುಶ್ಚಟಗಳ ದಾಸರಾಗದೆ ಉತ್ತಮ ದೈಹಿಕ, ಮಾನಸಿಕ ಆರೋಗ್ಯವನ್ನು ಹೊಂದಿ ದೇಶದ ಅಸ್ತಿಯಾಗಬೇಕೆಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಚ್.ವಿ.ರಮೇಶ್ ಕರೆ ನೀಡಿದ್ದಾರೆ. 7ನೇ ಹೊಸಕೋಟೆ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮದ್ಯ, ಗುಟ್ಕಾ, ಮಾದಕ ವಸ್ತುಗಳ ಸೇವನೆಯಿಂದ ಯುವಕ ಯುವತಿಯರು ಹಾಳಾಗುತ್ತಿದ್ದು, ಇದನ್ನು ತಪ್ಪಿಸಬೇಕು. ಮಕ್ಕಳಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಸಂಸ್ಕಾರವನ್ನು ಕಲಿಸಬೇಕು ಎಂದು ಕಿವಿಮಾತು ಹೇಳಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕೊಡಗು ಜಿಲ್ಲಾ ಸದಸ್ಯರಾದ ಎಂ.ಎನ್.ಚಂದ್ರಮೋಹನ್ ಅವರು ಸ್ವಾಸ್ಥ್ಯ ಸಂಕಲ್ಪ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಯೋಜನೆಯ ಜ್ಞಾನ ದೀಪ ಕಾರ್ಯಕ್ರಮದ ಅಡಿಯಲ್ಲಿ ಶೇ.80ರ ರಿಯಾಯಿತಿ ದರದಲ್ಲಿ ನೀಡಲಾದ ಬೆಂಚ್ ಡೆಸ್ಕ್ ಗಳ ಮಂಜೂರಾತಿ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾಭಿವೃದ್ದಿ ಅಧ್ಯಕ್ಷರಿಗೆ ನೀಡಲಾಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಇ.ಬಿ.ಜೋಸೆಫ್ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ 7ನೇ ಹೊಸಕೋಟೆ ಗ್ರಾ.ಪಂ.ನಂದೀಶ್ ಕುಮಾರ್, ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸೋಮಯ್ಯ, ಶಾಲೆಯ ಹಿರಿಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್,ಕೊಡಗು ಜಿಲ್ಲಾ ಲಾರಿ ಚಾಲಕರ ಹಾಗೂ ಮಾಲಕರ ಸಂಘದ ಕಾರ್ಯದರ್ಶಿ ಸುಗು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಗುಡ್ಡೆಹೊಸೂರು ವಲಯದ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಚಂಗಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಜಾ, ಒಕ್ಕೂಟದ ಅಧ್ಯಕ್ಷೆ ಕವಿತಾ, ವಲಯದ ಮೇಲ್ವಿಚಾರಕ ಯತೀಶ್, ಒಕ್ಕೂಟದ ಸೇವಾಪ್ರತಿನಿಧಿಯಾದ ನಿರ್ಮಲಾ ಪ್ರಕಾಶ್, ಶೌರ್ಯ ವಿಪತ್ತು ಸದಸ್ಯರು, ಶಾಲಾ ಶಿಕ್ಷಕ ವೃಂದದವರು, ಒಕ್ಕೂಟದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.