ಮಡಿಕೇರಿ ಫೆ.17 NEWS DESK : ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಕೊಡಗು ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಸರ್ಕಾರ ಮುಚ್ಚಬಾರದು ಎಂದು ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಕೊಡಗು ಜಿಲ್ಲಾಧ್ಯಕ್ಷ ಕೆ.ಜಿ.ಜಾಶಿರ್ ಮೂರ್ನಾಡು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಅತ್ಯಂತ ಪುಟ್ಟ ಜಿಲ್ಲೆಯಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಇದೀಗ ಯುವ ಸಮೂಹದ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವ ವಿಶ್ವ ವಿದ್ಯಾಲಯವನ್ನೇ ಮುಚ್ಚಲು ಮುಂದಾಗಿರುವುದು ಕೊಡಗಿನ ಕಡೆಗಣನೆಗೆ ಮತ್ತೊಂದು ನಿದರ್ಶನವಾಗಿದೆ ಎಂದು ಟೀಕಿಸಿದ್ದಾರೆ. ವಿಶ್ವ ವಿದ್ಯಾಲಯಕ್ಕೆ ಸಂಪನ್ಮೂಲ ಒದಗಿಸಲು ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ಆರ್ಥಿಕ ಹೊರೆಯ ನೆಪವೊಡ್ಡಿ ವಿವಿಯನ್ನು ಮುಚ್ಚಿದರೆ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಪ್ರತಿ ಜಿಲ್ಲೆಗೆ ವಿಶ್ವ ವಿದ್ಯಾಲಯ ಬೇಕೆಂಬ ಉದ್ದೇಶದಿಂದ 10 ನೂತನ ವಿವಿ ಗಳನ್ನು ಸ್ಥಾಪಿಸಿತು. ನಂತರ ಬಂದ ಸರ್ಕಾರ ಇದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿತ್ತು. ಆದರೆ ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ರಾಜಕೀಯ ಪ್ರೇರಿತದಂತೆ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ. ಕೊಡಗಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಹೊರ ಜಿಲ್ಲೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇದರ ನಡುವೆಯೇ ಸ್ಥಾಪನೆಯಾದ ಕೊಡಗು ವಿವಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಲ್ಲಿ ಹೊಸ ಆಶಾಭಾವನೆಯನ್ನು ಸೃಷ್ಟಿಸಿತ್ತು. ಅಲ್ಲದೆ ಪೋಷಕರಿಗೂ ಅನುಕೂಲಕರ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ರಾಜ್ಯ ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿ ಸಮೂಹದಲ್ಲಿ ನಿರಾಶೆ ಮೂಡಿದೆ. ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿ ಕೊಡಗು ವಿವಿಯನ್ನು ಜಿಲ್ಲೆಯಲ್ಲೇ ಉಳಿಸಬೇಕು. ವಿವಿ ಮುಚ್ಚಲು ಬಿಡುವುದಿಲ್ಲವೆಂದು ಶಾಸಕರುಗಳು ಕೇವಲ ಹೇಳಿಕೆಗಳನ್ನಷ್ಟೇ ನೀಡಿದರೆ ಸಾಲದು. ತಮ್ಮ ಪ್ರಭಾವವನ್ನು ಬಳಸಿ ಮತ್ತು ಕೊಡಗು ಜಿಲ್ಲೆಯ ಶೈಕ್ಷಣಿಕ ಪರಿಸ್ಥಿತಿಯನ್ನು ವಿವರಿಸಿ ವಿವಿಯನ್ನು ಮುಚ್ಚದಂತೆ ಕ್ರಮ ಕೈಗೊಳ್ಳಬೇಕು ಎಂದು ಕೆ.ಜಿ.ಜಾಶಿರ್ ಒತ್ತಾಯಿಸಿದ್ದಾರೆ. ವಾಣಿಜ್ಯ ಬೆಳೆ ಕಾಫಿಯನ್ನು ಬೆಳೆಯುವ ಕೊಡಗು ಜಿಲ್ಲೆ ತೆರಿಗೆ ಪಾವತಿ ಮತ್ತು ಕಾವೇರಿ ನದಿ ನೀರಿನ ಮೂಲಕ ರಾಜ್ಯ ಸರ್ಕಾರಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಿದೆ. ಇದಕ್ಕೆ ಬದಲಾಗಿ ಸರ್ಕಾರ ಕೂಡ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ, ವಿಶ್ವ ವಿದ್ಯಾಲಯವನ್ನು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿರುವುದಾಗಿ ಭಾವಿಸಿ ಉಳಿಸಲು ಮುಂದಾಗಬೇಕು. ವಿವಿಗೆ ಅಗತ್ಯವಿರುವ ಅನುದಾನ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿರುವ ಅವರು, ಒಂದು ವೇಳೆ ವಿವಿಯನ್ನು ಮುಚ್ಚಿದರೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.











