ಬೆಂಗಳೂರು ಫೆ.18 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಲಿತ ಮುಖಂಡರುಗಳೊಂದಿಗಿನ ಬಜೆಟ್ ಪೂರ್ವ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ಶೋಷಿತರ, ದಲಿತ ಸಮಯದಾಯಗಳ ಬೇಡಿಕೆಗಳನ್ನು ನಾನು ಮುಖ್ಯಮಂತ್ರಿ ಆದ ಬಳಿಕ ನಿರಂತರವಾಗಿ ಈಡೇರಿಸುತ್ತಲೇ ಇದ್ದೇನೆ. ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನ ಅಭಿವೃದ್ಧಿ ಹಣದಲ್ಲಿ ಶೇ24 ರಷ್ಟು ಹಣ ಮೀಸಲಾಗಿಡುವ ಕಾಯ್ದೆ ಜಾರಿ ಮಾಡಿದ್ದು ನಮ್ಮ ಸರ್ಕಾರ. ಈ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರ್ಕಾರವಾಗಲಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ ಎಂದರು. ದಲಿತ ಸಮುದಾಯದ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿ ವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಾವು ಮಾತ್ರ. ಇದನ್ನು 2 ಕೋಟಿಗೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಬಗ್ಗೆಯೂ ಪರಿಶೀಲಿಸುತ್ತೇನೆ. ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು ಮಾತ್ರ.
ಪಿಟಿಸಿಎಲ್ ಕಾಯ್ದೆ ಮಾಡಿದ್ದು ನಾವು. ಹೊಸದಾಗಿ ಕೈಗಾರಿಕೆ ಆರಂಭಿಸುವವರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಿದ್ದೇವೆ. ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆ, ಕಾನೂನು, ನಿಯಮಗಳನ್ನು ಮಾಡಿರುವ ದಾಖಲೆ ನಮ್ಮ ಸರ್ಕಾರದ್ದಾಗಿದೆ ಎಂದು ಹೇಳಿದರು.











