ಮಡಿಕೇರಿ ಫೆ.18 NEWS DESK : ಸಾಮಾಜಿಕ ಕಳಕಳಿಯೊಂದಿಗೆ ಸಾಹಿತ್ಯ ಕ್ಷೇತ್ರದ ಪ್ರಗತಿಗೆ ಅಪಾರ ಕೊಡುಗೆಯನ್ನು ನೀಡುತ್ತಿರುವ ಕೊಡವ ಮಕ್ಕಡ ಕೂಟ ಸಂಘಟನೆ 12ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ಇಂದು ಲೇಖಕಿ ಮುಕ್ಕಾಟಿರ ಮೌನಿ ನಾಣಯ್ಯ ಅವರು ರಚಿಸಿರುವ “ಆ ಒರ್ ಬೈಟ್…?” ಎಂಬ ಕೊಡವ ಮಕ್ಕಡ ಕೂಟದ 109ನೇ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಬಯವಂಡ ಮಹಾಬಲ ಪೂವಯ್ಯ ಪುಸ್ತಕ ಬಿಡುಗಡೆ ಮಾಡಿದರು. ಸಾಹಿತಿ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರರಾದ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ಭಾಷೆಯ ಬೆಳೆವಣಿಗೆಗೆ ಸಾಹಿತ್ಯದ ಅಗತ್ಯವಿದೆ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು. ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಲೇಖಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಕೊಡವ ಮಕ್ಕಡ ಕೂಟ ಕೊಡವ ಭಾಷೆ ಮಾತ್ರವಲ್ಲದೆ ಇತರ ಭಾಷೆಗಳ ಸಾಹಿತ್ಯ ಬೆಳವಣಿಗೆಗೂ ಸಹಕಾರ ನೀಡುತ್ತಿರುವುದು ಶ್ಲಾಘನೀಯವೆಂದರು. ‘ಆ ಒರ್ ಬೈಟ್’ ಪುಸ್ತಕ ಸಹಜ ಪರಿಕಲ್ಪನೆ ಮತ್ತು ಅರ್ಥಗರ್ಭಿತವಾಗಿದೆ. ಮುಂದಿನ ದಿನಗಳಲ್ಲಿ ಮುಕ್ಕಾಟಿರ ಮೌನಿ ನಾಣಯ್ಯ ಅವರಿಂದ ಮತ್ತಷ್ಟು ಪುಸ್ತಕಗಳು ಹೊರಬರಲಿ ಎಂದು ಶುಭಹಾರೈಸಿದರು. ಆ ಒರ್ ಬೈಟ್…? ಪುಸ್ತಕದ ಲೇಖಕಿ ಮುಕ್ಕಾಟಿರ ಮೌನಿ ನಾಣಯ್ಯ ಮಾತನಾಡಿ, ಬದುಕಿನಲ್ಲಿ ಗೆಳೆತನ ಮತ್ತು ಪ್ರೀತಿಗೆ ಇರುವ ಅಗಾಧವಾದ ಶಕ್ತಿಯನ್ನು ತೋರಿಸುವ ಸುಂದರ ಚಿತ್ರಣ “ಆ ಒರ್ ಬೈಟ್…?” ಕೊಡವ ಕಾದಂಬರಿಯಲ್ಲಿದೆ ಎಂದರು. ಪ್ರೀತಿ, ಸ್ನೇಹದ ಹೆಸರಿನಲ್ಲಿ ಮೋಸದ ಜಾಲಕ್ಕೆ ಸಿಲುಕಿ ನೊಂದು ಬೆಂದ ಯುವಪ್ರೇಮಿಗಳ ಕಥೆ ಇದರಲ್ಲಿದೆ. ಪವಿತ್ರ ಪ್ರೀತಿಗೆ ಯಾವತ್ತೂ ಸೋಲಿಲ್ಲ ಎನ್ನುವ ಅಂಶವನ್ನು ಚಿತ್ರಿಸಲಾಗಿದೆ. ಈ ಪುಸ್ತಕ ಸಿನಿಮಾ ಮಾದರಿಯಲ್ಲಿದ್ದು, ಕಥೆಯ ಮಧ್ಯದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಮೂರು ಹಾಡುಗಳನ್ನು ನೀಡಲಾಗಿದೆ ಎಂದು ಹೇಳಿದರು. ಇದೇ ಸಂದರ್ಭ ಕೊಡವ ಮಕ್ಕಡ ಕೂಟ ಹಾಗೂ ಪುಸ್ತಕ ಬಿಡುಗಡೆಗೆ ಸಹಕರಿಸಿದ ದಾನಿಗಳಿಗೆ ಧನ್ಯವಾದ ಸಲ್ಲಿಸಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಆ ಒರ್ ಬೈಟ್ ಪುಸ್ತಕವು 12ನೇ ವರ್ಷಚಾರಣೆಯ ಪ್ರಯುಕ್ತ ಬಿಡುಗಡೆ ಮಾಡಲಾಗಿದ್ದು, ಇದು ಸಿನಿಮಾ ಮಾದರಿಯಲ್ಲಿದ್ದು, ಇದೊಂದು ವಿಶೇಷ ಪ್ರಯತ್ನವಾಗಿದೆ. ಮುಂದಿನ ದಿನಗಳಲ್ಲಿ ಚಲನಚಿತ್ರವಾಗಿ ತೆರೆಕಾಣುವಂತಾಗಲಿ ಎಂದು ಹಾರೈಸಿದರು. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಕೇವಲ ಕೊಡವ ಪುಸ್ತಕ ಮಾತ್ರವಲ್ಲದೆ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯ ಕೃತಿಗಳನ್ನು ಬಿಡುಗಡೆ ಮಾಡಿದೆ. ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಕೊಡವ ಮಕ್ಕಡ ಕೂಟ 2024ರಲ್ಲಿ ಸುಮಾರು 27 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಪ್ರಶಂಸೆಗೆ ಪಾತ್ರವಾಗಿದೆ. ಕೇವಲ ಪುಸ್ತಕಗಳ ಬಿಡುಗಡೆಗೆ ಮಾತ್ರ ಒತ್ತು ನೀಡದೆ ಮರೆತು ಹೋಗಿದ್ದ ಹಿರಿಯರನ್ನು ನೆನಪು ಮಾಡಿಕೊಡುವುದು, ಅವರ ಜಯಂತಿ ಆಚರಿಸುವುದು, ಪ್ರತಿಮೆಗಳನ್ನು ಅನಾವರಣಗೊಳಿಸುವುದು ಸೇರಿದಂತೆ ಕೊಡಗಿನ ಸಂಸ್ಕೃತಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಹಲವು ರಸ್ತೆಗಳಿಗೆ ಕೊಂಗಂಡ ಗಣಪತಿ, ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಕೊರವಂಡ ನಂಜಪ್ಪ, ಪಂದ್ಯಂಡ ಬೆಳ್ಯಪ್ಪ ಅವರ ಹೆಸರುಗಳನ್ನು ಮರು ನಾಮಕರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಸಮಾಜಮುಖಿ ಕಾರ್ಯ ನಡೆಸುವುದರೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವ ಪ್ರಕ್ರಿಯೆಯನ್ನು ಮುಂದುವರೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಚಿಯಕ್‍ಪೂವಂಡ ಸಚಿನ್ ಪೂವಯ್ಯ ಹಾಗೂ ಪೊನ್ನಚೆಟ್ಟಿರ ಪ್ರದೀಪ್ ಉಪಸ್ಥಿತರಿದ್ದರು.











