ಕುಶಾಲನಗರ ಫೆ.18 NEWS DESK : ಮಕ್ಕಳ ಕಲಿಕಾ ಪ್ರತಿಭೆಗೆ ಹಲವಾರು ಶೈಕ್ಷಣಿಕ ಚಟುವಟಿಕೆಗಳುಳ್ಳ ಮಕ್ಕಳ ಕಲಿಕಾ ಹಬ್ಬವು ಮಕ್ಕಳ ಕಲಿಕಾ ಪ್ರೇರಣೆ ಮತ್ತು ಬಲವರ್ಧನೆಗೆ ಉತ್ತಮ ವೇದಿಕೆ ಒದಗಿಸುತ್ತದೆ ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯ ಹಿರಿಯ ಉಪನ್ಯಾಸಕಿ ಬಿ.ಎನ್.ಪುಷ್ಪ ಹೇಳಿದರು. ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಕ್ಲಸ್ಟರ್ ಕೇಂದ್ರದ ವತಿಯಿಂದ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ( ಫೆ.18 ರಂದು ) ಎಫ್.ಎಲ್.ಎನ್.: “ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ(Foundation literacy and Numeracy) ಕುರಿತು ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಸಂಭ್ರಮದ ಮಕ್ಕಳ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲಿಕಾ ಹಬ್ಬವು ಮಕ್ಕಳ ಪ್ರತಿಭೆ ಹೊರ ತರಲು ಹಾಗೂ ಅವರಲ್ಲಿ ಸಂತಸದ ಕಲಿಕೆಯೊಂದಿಗೆ ಅವರ ಪ್ರತಿಭಾನ್ವೇಷಣೆಗೆ ಸಹಕಾರಿಯಾಗಿದೆ ಎಂದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿನೂತನ ಚಟುವಟಿಕೆಗಳುಳ್ಳ ಕಲಿಕಾ ಹಬ್ಬವು ಮಕ್ಕಳ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡುವುದರೊಂದಿಗೆ ಅವರಲ್ಲಿ ಕಲಿಕಾ ಪ್ರೇರಣೆ ಬೆಳೆಸಲು ಸೂಕ್ತ ವೇದಿಕೆ ಒದಗಿಸುತ್ತದೆ. ಈ ಹಬ್ಬವು ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿದೆ ಎಂದು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ಮಕ್ಕಳ ಕಲಿಕಾ ಹಬ್ಬದ ಉದ್ದೇಶ ಮತ್ತು ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಮಕ್ಕಳ ಕಲಿಕಾ ಹಬ್ಬದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಿ.ಆರ್.ಪಿ.ಟಿ.ಈ.ವಿಶ್ವನಾಥ್ , ವಿದ್ಯಾರ್ಥಿಗಳು ತಾವು ಕಲಿತ ಪಾಠಗಳನ್ನೇ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ಪ್ರದರ್ಶಿಸಿದರೆ, ಮಕ್ಕಳಿಗೆ ಕಲಿಕೆಯೇ ಒಂದು ಹಬ್ಬವಾಗುತ್ತದೆ. ಈ ಹಬ್ಬದಲ್ಲಿ ಮಕ್ಕಳಿಗೆ ಏಳು ವಿವಿಧ ಸ್ಪರ್ಧೆಗಳ ಮೂಲಕ ಅವರಲ್ಲಿ ಕಲಿಕಾ ಪ್ರೇರೇಪಣೆ ಬೆಳೆಸಲಾಗುತ್ತಿದೆ ಎಂದರು. ಕುಶಾಲನಗರ ಪಿ.ಎಂ.ಶ್ರೀ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಬಿ.ಎನ್.ಚಂದನ್ ಕುಮಾರ್, ಕಲಿಕಾ ಹಬ್ಬದಲ್ಲಿ ಮಕ್ಕಳು ಸಂತಸದಿಂದ ಪಾಲ್ಗೊಂಡಿರುವುದನ್ನು ಶ್ಲಾಘಿಸಿದರು. ವಾಲ್ನೂರು- ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎನ್.ವಸಂತಕುಮಾರ್, ಈ ಹಬ್ಬವು ಮಕ್ಕಳಲ್ಲಿ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾಗಿದೆ ಎಂದರು. ಮುಳ್ಳುಸೋಗೆ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ರಶ್ಮಿ, ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್. ಭಾಗ್ಯ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಎಚ್.ಎಸ್.ಉಮಾದೇವಿ, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಸಹ ಕಾರ್ಯದರ್ಶಿ ಎಸ್.ಆರ್.ಶಿವಲಿಂಗ, ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಾದ ಎಸ್.ಕೆ.ಜಲಜಾಕ್ಷಿ, ಎಂ.ಎಂ. ಭಾರತಿ,ಸಾಕಮ್ಮ, ಲಕ್ಷ್ಮಿ, ಶಾಂತಲಾ, ವಿವಿಧ ಶಾಲೆಯ ಶಿಕ್ಷಕರು, ಪೋಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಶಿಕ್ಷಕಿ ಪಿ.ಆರ್.ದಿವ್ಯ ಸ್ವಾಗತಿಸಿದರು. ಶಿಕ್ಷಕಿ ಎಂ.ಬಿ. ಜಾನಕಿ ವಂದಿಸಿದರು.
ಮಕ್ಕಳ ಪ್ರತಿಭಾ ಅನಾವರಣ :: ಎಫ್.ಎಲ್.ಎನ್.: “( ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ) ಕಲಿಕಾ ಹಬ್ಬದ ಅಂಗವಾಗಿ 1 ರಿಂದ 5 ನೇ ತರಗತಿ ವರೆಗಿನ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಮಕ್ಕಳು ಕಲಿಕಾ ಹಬ್ಬದಲ್ಲಿ ಗಟ್ಟಿ ಓದುವುದು, ಉತ್ತಮ ಕೈ ಬರಹ, ಸಂತಸದಾಯಕ ಗಣಿತ ಕಲಿಕೆ, ಜ್ಞಾಪನ ಶಕ್ತಿ ಪರೀಕ್ಷೆ, ಕಥೆ ಹೇಳುವುದು,ಮಕ್ಕಳ ಪಾಲಕರ ಸಂಬಂಧ ಸೇರಿದಂತೆ ವಿವಿಧ ಅಭ್ಯಾಸಾತ್ಮಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂತಸಪಟ್ಟರು.












