ಮಡಿಕೇರಿ ಫೆ.18 NEWS DESK : ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಮಡಿಕೇರಿ ಕ್ಷೇತ್ರದ ಶಾಸಕರನ್ನು ಹೊಗಳುವ ಭರದಲ್ಲಿ ಈ ಹಿಂದಿನ ಶಾಸಕರು ನಗರದ ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನ ತರಲಿಲ್ಲವೆಂದು ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ ಅವರು ನೀಡಿರುವ ಹೇಳಿಕೆ ಖಂಡನೀಯವೆಂದು ಬಿಜೆಪಿ ಎಸ್‍ಸಿ ಮೋಚಾದ ನಗರಾಧ್ಯಕ್ಷ ಹೆಚ್.ಜಿ.ಮುಕುಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈಗಿನ ಶಾಸಕರು 3 ಕೋಟಿ ರೂ. ನೀಡಿದರು ಎನ್ನುವ ವಿಚಾರವನ್ನೇ ದೊಡ್ಡದು ಮಾಡಿ ಪ್ರಚಾರಕ್ಕಾಗಿ ಹೇಳಿಕೆ ನೀಡಿರುವ ಪ್ರಕಾಶ್ ಆಚಾರ್ಯ ಅವರು, ಮೊದಲು ದಸರಾ ಅನುದಾನವನ್ನು ದಸರಾ ಸಮಿತಿಗಳಿಗೆ ಬಿಡುಗಡೆ ಮಾಡಿಸಿಕೊಡಲಿ ಎಂದು ಸವಾಲು ಹಾಕಿದ್ದಾರೆ. ಶಾಸಕರ ಪರ ಪ್ರಚಾರ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಮಾಜಿ ಶಾಸಕರು ಹೆಚ್ಚಿನ ಅನುದಾನ ತರಲಿಲ್ಲ ಎಂದು ಸುಳ್ಳು ಆರೋಪ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಮಡಿಕೇರಿ ನಗರದ ಅಭಿವೃದ್ಧಿಗೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅವರು ತಮ್ಮ ಅಧಿಕಾರವಧಿಯಲ್ಲಿ ದಾಖಲೆ ಮೊತ್ತದ ಅನುದಾನವನ್ನು ತಂದಿದ್ದಾರೆ. ಇಂದು ನಗರ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿರುವುದಕ್ಕೆ ಕುಂಡಾಮೇಸ್ತ್ರಿ ಯೋಜನೆಯೇ ಕಾರಣವಾಗಿದೆ. ಈ ಯೋಜನೆಗಾಗಿ ಸುಮಾರು 45 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ಮಾಜಿ ಶಾಸಕರುಗಳಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳ ಪ್ರಯತ್ನದ ಫಲದಿಂದ ಇದು ಆಗಿದೆ. ಅಮೃತ್ ಯೋಜನೆಯಡಿ ಕುಡಿಯುವ ನೀರಿಗಾಗಿ 50 ಕೋಟಿ ರೂ.ಗಳನ್ನು ತಂದಿರುವ ಹೆಗ್ಗಳಿಕೆ ಅಪ್ಪಚ್ಚುರಂಜನ್ ಅವರಿಗೆ ಸಲ್ಲಬೇಕು. ನಗರೋತ್ಥಾನ ಕಾರ್ಯಕ್ರಮದಡಿ ವಿವಿಧ ಹಂತಗಳಲ್ಲಿ 40 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದಾರೆ. ರಸ್ತೆಗಳು ಮತ್ತು ವಿವಿಧ ಜಲಮೂಲಗಳ ಅಭಿವೃದ್ಧಿಯನ್ನು ಮಾಡಿದ್ದಾರೆ. ಮಡಿಕೇರಿ ನಗರ ಪ್ರವಾಸೋದ್ಯಮದ ಮೂಲಕವೂ ಪ್ರಗತಿ ಸಾಧಿಸಲಿ ಎನ್ನುವ ಕಾರಣಕ್ಕೆ ಗ್ರೇಟರ್ ರಾಜಾಸೀಟ್ ಯೋಜನೆಯನ್ನು ರೂಪಿಸಿ ಉದ್ಯಾನವನವನ್ನು ಕೋಟ್ಯಾಂತರ ಹಣದಲ್ಲಿ ಅತ್ಯಾಕರ್ಷಕಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಅಭಿವೃದ್ಧಿಯ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದ ಅಪ್ಪಚ್ಚುರಂಜನ್ ಅವರು ದಾಖಲೆಯ ಮೊತ್ತದ ಅನುದಾನ ತಂದಿದ್ದರೂ ಪ್ರಕಾಶ್ ಆಚಾರ್ಯ ಅವರು ಸುಳ್ಳು ಆರೋಪಗಳನ್ನು ಮಾಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ದಸರಾ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ಪ್ರಕಾಶ್ ಆಚಾರ್ಯ ಅವರು ದಸರಾ ಕಳೆದು 4 ತಿಂಗಳಾಗಿದ್ದರೂ ಅನುದಾವನ್ನು ಬಿಡುಗಡೆ ಮಾಡಿಸಿಕೊಡುವಲ್ಲಿ ಯಾಕೆ ವಿಫಲರಾಗಿದ್ದಾರೆ ಎಂದು ಹೆಚ್.ಜಿ.ಮುಕುಂದ ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಕೊಡಗು ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಜೂರು ಮಾಡಿಸಿದ ಕೊಡಗು ವಿಶ್ವ ವಿದ್ಯಾಲಯವನ್ನು ಸರ್ಕಾರ ಮುಚ್ಚುವ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೊದಲು ಇದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಶಾಸಕರ ಮೂಲಕ ಮಾಡಿಸಲಿ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುವುದನ್ನು ಮತ್ತು ಮಾಜಿ ಶಾಸಕರುಗಳ ಕಾರ್ಯವೈಖರಿಯ ಕುರಿತು ಟೀಕೆ ಮಾಡುವುದನ್ನು ಮೊದಲು ಬಿಡಲಿ ಎಂದು ಆಗ್ರಹಿಸಿದ್ದಾರೆ.











