



ನಾಪೋಕ್ಲು ಫೆ.20 NEWS DESK : ಹೊದ್ದೂರು ಗ್ರಾಮದ ಶ್ರೀ ಶಾಸ್ತ ಈಶ್ವರ ದೇವಾಲಯದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕೋಲ ಶ್ರದ್ಧಾಭಕ್ತಿಯಿಂದ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ಶಾಸ್ತ ಈಶ್ವರ ದೇವರ ಬಲಿ ಗಣಪತಿ ಹೋಮ, ಅಲಂಕಾರ ಪೂಜೆ, ಬೇಟೆ ಅಯ್ಯಪ್ಪ ಸನ್ನಿಧಿಗೆ ಅಭಿಷೇಕ ಪೂಜೆ, ವಿಷ್ಣುಮೂರ್ತಿ ದೈವ ನೆಲೆಗೆ ಅಭಿಷೇಕ ಪೂಜೆ ಜರುಗಿತು. ಮಧ್ಯಾಹ್ನ ಶ್ರೀ ಶಾಸ್ತ ಈಶ್ವರ ದೇವರ ನೆನಪು ಬಲಿ ಬಳಿಕ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು. ಸಂಜೆ ಶ್ರೀ ಶಾಸ್ತ ಈಶ್ವರ ದೇವರ ಆವೃತ ಸ್ನಾನ ಜರಗಿತು. ವಿವಿಧ ನೃತ್ಯ ಸಂಪ್ರೊಕ್ಷಣೆಯೊಂದಿಗೆ ದೈವಿಕ ವಿಧಿ ವಿಧಾನಗಳು ಜರುಗಿದವು. ಬಳಿಕ ವಿಷ್ಣುಮೂರ್ತಿ ದೇವರ ತಾಯತ ತೆರೆ ಹಾಗೂ ಮೇಲೇರಿಗೆ ಅಗ್ನಿ ಸ್ಪರ್ಶ ನೆರವೇರಿತು. ಪ್ರಧಾನ ಅರ್ಚಕ ಜಯರಾಮ ತಂತ್ರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು. ಈ ಸಂದರ್ಭ ಗ್ರಾಮದ ದೇವ ತಕ್ಕ ನೆರವಂಡ ಸಂಜಯ್ ಪೂಣಚ್ಚ, ದೇವಾಲಯ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ದೇವಾಲಯ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.