
ಮಡಿಕೇರಿ NEWS DESK ಫೆ.23 : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಬ್ಲಾಕ್ ಎಮ್ಮೆಮಾಡು ಗ್ರಾ.ಪಂ ವ್ಯಾಪ್ತಿಯಲ್ಲಿ ನೂತನವಾಗಿ ಕಾಂಕ್ರೀಟೀಕರಣಗೊಂಡ ಪರಂಬು ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಇದೇ ಸಂದರ್ಭ ಶಾಸಕರು ದೋಣಿ ಕಡಾವ್ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ಎರಡೂ ಕಾಮಗಾರಿಗಳಿಗೆ ಶಾಸಕರ ವಿಶೇಷ ಅನುದಾನದಡಿ ಹಣ ಒದಗಿಸಲಾಗಿದೆ. ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿರುವ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಪ್ರತಿಯೊಂದೂ ಕಾಮಗಾರಿಯನ್ನು ಜನರ ಹಿತದೃಷ್ಟಿಯಿಂದ ಕೈಗೊಳ್ಳಲಾಗುತ್ತಿದೆ. ಗುಣಮಟ್ಟದ ಕಾಮಗಾರಿಗೆ ಎಲ್ಲರೂ ಸಹಕರಿಸಬೇಕು. ಜನರ ಬೇಡಿಕೆಗಳಿಗೆ ಸ್ಪಂದಿಸಲು ಹೆಚ್ಚು ಉತ್ಸುಕನಾಗಿದ್ದು, ಸರ್ವರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಸ್ಥಳೀಯ ಗ್ರಾಮಸ್ಥರು ಮಾತನಾಡಿ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದೆ. ಕ್ಷೇತ್ರದ್ಯಾಂತ ಅದರಲ್ಲೂ ವಿಶೇಷವಾಗಿ ಈ ಭಾಗದಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದು ಸ್ಮರಿಸಿಕೊಂಡರು ಮತ್ತು ಧನ್ಯವಾದ ಅರ್ಪಿಸಿದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ಹಂಸ ಮತ್ತಿತರರು ಹಾಜರಿದ್ದರು.









