


ಮಡಿಕೇರಿ ಮಾ.5 NEWS DESK : ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಮತ್ತು ಪಕ್ಷದಲ್ಲಿ ಭದ್ರನೆಲೆ ಕಂಡುಕೊಳ್ಳಲು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದರ ವಿರುದ್ಧ ಜಿಲ್ಲಾ ಕಾಂಗ್ರೆಸ್ ವಕ್ತಾರರೊಬ್ಬರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು, ಇವರ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ವಿರಾಜಪೇಟೆ ಮಂಡಲ ಬಿಜೆಪಿಯ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೈಸೂರು- ಕೊಡಗು ಕ್ಷೇತ್ರದ ಜನತೆಯ ಆಶೀರ್ವಾದದಿಂದ ಸಂಸದರಾಗಿ ಆಯ್ಕೆಯಾಗಿರುವ ಯದುವೀರ್ ಒಡೆಯರ್ ಅವರ ಕಾರ್ಯವೈಖರಿಯ ಕುರಿತು ವಿಶ್ಲೇಶಿಸುವ ನೈತಿಕತೆ ಕಾಂಗ್ರೆಸ್ ವಕ್ತಾರರಿಗೆ ಇಲ್ಲ. ಕಾಂಗ್ರೆಸ್ ನಾಯಕರನ್ನು ಮೆಚ್ಚಿಸುವುದಕ್ಕೋಸ್ಕರ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರಿಗೆ ತಪ್ಪು ಸಂದೇಶ ರವಾನಿಸಲಾಗುತ್ತಿದೆ. ಅಲ್ಲದೆ ಅತ್ಯಂತ ಗೌರವಯುತ ಸ್ಥಾನದಲ್ಲಿರುವ ಸಂಸದರ ಕುರಿತು ಅಪಪ್ರಚಾರ ಮಾಡಲಾಗುತ್ತಿದ್ದು, ಕಾಂಗ್ರೆಸ್ ವಕ್ತಾರನೆಂದು ಹೇಳಿಕೊಳ್ಳುತ್ತಿರುವ ಈ ವ್ಯಕ್ತಿಯ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಇತರೆಡೆಯೂ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಕುರಿತು ಮತ್ತು ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರಿಗೇ ರಕ್ಷಣೆ ಇಲ್ಲದ ಪರಿಸ್ಥಿತಿ ಉದ್ಭವಿಸಿರುವುದನ್ನು ಸಂಸದರು ಉಲ್ಲೇಖಿಸಿರುವುದೇ ತಪ್ಪು ಎನ್ನುವ ರೀತಿಯಲ್ಲಿ ನೀಡಿರುವ ಹೇಳಿಕೆ ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ವಿವಿಧೆಡೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಕರಣಗಳು ನಡೆಯುತ್ತಲೇ ಇದೆ. ಕೊಡಗು ಜಿಲ್ಲೆಯಲ್ಲೂ ಪೊಲೀಸರು ಸ್ವತಂತ್ರ್ಯವಾಗಿ ಸೇವೆ ಸಲ್ಲಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕಾಂಗ್ರೆಸ್ ಕಾರ್ಯಕರ್ತರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಬೆಳವಣಿಗೆಗಳು ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರಕರಣ ದಾಖಲಿಸಿಕೊಂಡರೆ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ ಮಾಡಲಾಗುತ್ತಿದೆ ಎಂದು ರಾಕೇಶ್ ದೇವಯ್ಯ ಆರೋಪಿಸಿದ್ದಾರೆ. ಲಕ್ಷಾಂತರ ಜನರ ಪ್ರೀತಿ ಗಳಿಸಿ ಆಯ್ಕೆಯಾದ ಸಂಸದರ ಕುರಿತು ಪ್ರಚಾರಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಅಭಿವೃದ್ಧಿಯ ಹಿನ್ನಡೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವವರ ವಿರುದ್ಧ ಕಾಂಗ್ರೆಸ್ ವಕ್ತಾರರು ಮೊದಲು ಮಾತನಾಡಲಿ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊಡಗು ಜಿಲ್ಲೆಗೆ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆ ಏನು ಎನ್ನುವ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಅವರು ಒತ್ತಾಯಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿದ ಕೊಡಗು ವಿಶ್ವ ವಿದ್ಯಾನಿಲಯವನ್ನು ಮುಚ್ಚುವ ತಪ್ಪು ನಿರ್ಧಾರದ ಮೂಲಕ ಜಿಲ್ಲೆಯ ಜನರಿಂದ ಹಾಗೂ ಸ್ವತ: ಕಾಂಗ್ರೆಸ್ಸಿಗರಿಂದಲೇ ರಾಜ್ಯ ಸರ್ಕಾರ ಟೀಕೆಗೆ ಗುರಿಯಾಗಿದೆ. ಇದನ್ನು ಮರೆಮಾಚಲು ಮತ್ತು ಜನರ ಹಾದಿ ತಪ್ಪಿಸಲು ಕಾಂಗ್ರೆಸ್ ವಕ್ತಾರರು ದಕ್ಷ ಆಡಳಿತಗಾರ ಸಂಸದ ಯದುವೀರ್ ಒಡೆಯರ್ ಅವರನ್ನು ಗುರಿಯಾಗಿಸಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ, ಇದೇ ರೀತಿಯ ಹೇಳಿಕೆಗಳನ್ನು ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಲೋಕಸಭಾ ಸದಸ್ಯರಾಗಿ ಕೇವಲ ಒಂದು ವರ್ಷವನ್ನಷ್ಟೇ ಪೂರೈಸಿರುವ ಯದುವೀರ್ ಅವರ ಅಭಿವೃದ್ಧಿಪರ ಚಿಂತನೆಯ ವೇಗವನ್ನು ಸಹಿಸದ ವಕ್ತಾರರು ಶೂನ್ಯ ಸಾಧನೆಯ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಡಗು ಜಿಲ್ಲೆಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.