


ಮೈಸೂರು, ಮಾ.8 NEWS DESK : ನಾಡಿನ ಎಲ್ಲ ನಾಗರಿಕರು ಆರೋಗ್ಯದಿಂದಿರಬೇಕು ಮತ್ತು ಔಷಧಿಗಳ ಖರೀದಿ ಜನರಿಗೆ ಹೊರೆಯಾಗಬಾರದು ಎಂಬ ದಿವ್ಯ ಆಲೋಚನೆಯೊಂದಿಗೆ ಆರಂಭಿಸಲಾಗಿರುವ ಜನೌಷಧಿ ಕೇಂದ್ರಗಳು ಜನೋಪಕಾರಿಯಾಗಿವೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಚಾಮರಾಜ ಕೃಷ್ಣದತ್ತ ಒಡೆಯರ್ ತಿಳಿಸಿದ್ದಾರೆ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿರುವ ಜನೌಷಧಿ ಕೇಂದ್ರದಲ್ಲಿ ಜನೌಷಧಿ ಕೇಂದ್ರಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಡ ಹಾಗೂ ಮಧ್ಯಮ ವರ್ಗ ಹಾಗೂ ಸಾಮಾನ್ಯ ಜನರಿಗೆ ಜನೌಷಧಿ ಕೇಂದ್ರಗಳಿಂದ ಭಾರಿ ಪ್ರಯೋಜನಗಳಾಗಿವೆ. ಜನೌಷಧಿಗಳ ಬಳಕೆ ಮತ್ತು ಉಪಯೋಗಗಳ ಬಗ್ಗೆ ಈಗಾಗಲೇ ಸಾಕಷ್ಟು ಅಭಿಯಾನ ನಡೆಸಲಾಗಿದೆ ಎಂದು ಒಡೆಯರ್ ತಿಳಿಸಿದರು. ಜನೌಷಧಿ ಕೇಂದ್ರಗಳು ಆರಂಭವಾದ ನಂತರ ಮಧ್ಯಮ ವರ್ಗದವರ ಮೇಲೆ ಹೆಚ್ಚಿನ ಹೊರೆ ಆಗುತ್ತಿಲ್ಲ. ಈ ಮೊದಲು ಔಷಧಿಗಳಿಗೆ ಹೆಚ್ಚು ವ್ಯಯಿಸುತ್ತಿದ್ದ ಜನರು ಈಗ ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳನ್ನು ಖರೀದಿ ಮಾಡುವ ಮೂಲಕ ಸಾಕಷ್ಟು ಹಣ ಉಳಿಸುತ್ತಿದ್ದಾರೆ ಎಂದು ಹೇಳಿದರು. ಕಡಿಮೆ ಬೆಲೆಯಿಂದಾಗಿ ಬಡ ರೋಗಿಗಳಿಗೆ ಜನೌಷಧಿ ಕೇಂದ್ರಗಳು ಅನುಕೂಲವಾಗಿದೆ. ಜನೌಷಧಿ ಮಳಿಗೆಗಳಲ್ಲಿ ಬಿಪಿ, ಷುಗರ್, ಅಸಿಡಿಟಿ ಹಾಗೂ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಔಷಧ ಲಭ್ಯವಾಗುತ್ತಿದೆ. ಇತ್ತೀಚೆಗೆ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಮಾತ್ರೆ ಸಿಗುತ್ತಿದೆ ಎಂದು ಸಂಸದರು ತಿಳಿಸಿದರು. ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನೌಷಧಿ ಕೇಂದ್ರಗಳಿಗೆ ನೂತನ ಸ್ಪರ್ಶ ನೀಡಿದರು. ಈಗ ಲಕ್ಷಾಂತರ ಜನೌಷಧಿ ಕೇಂದ್ರಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಿವೆ. ನಮ್ಮ ಕೇಂದ್ರ ಬಿಜೆಪಿ ಸರ್ಕಾರದ ಜನಪರ ಕಾಳಜಿಗಳಿಗೆ ಇದು ಸಾಕ್ಷಿಯಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದರು.
ಮಡಿಕೇರಿಯಲ್ಲಿ ಜನೌಷಧಿ ಕೇಂದ್ರ ದಿನಾಚರಣೆ :: ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದ ಯದುವೀರ್ ಒಡೆಯರ್ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಜನೌಷಧಿ ಕೇಂದ್ರದಲ್ಲಿ ಜನೌಷಧಿ ಕೇಂದ್ರಗಳ ದಿನಾಚರಣೆಯಲ್ಲಿ ಪಾಲ್ಗೊಂಡರು. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಜನೌಷಧಿ ಕೇಂದ್ರಕ್ಕೆ ಹೆಚ್ಚು ಜನರು ಭೇಟಿ ನೀಡುತ್ತಿದ್ದು, ಇಲ್ಲಿನ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಜನಪರ ಹಾಗೂ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಸದಾ ಮುಂದಾಗಿದೆ. ಮುಂದಿನ ದಿನಗಳಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ. ನಮ್ಮ ಕ್ಷೇತ್ರದಲ್ಲಿಯೂ ಹೆಚ್ಚು ಜನೌಷಧಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.