


ಮಡಿಕೇರಿ ಮಾ.12 NEWS DESK : 2025-26ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ನಿರೀಕ್ಷೆಗೂ ಮೀರಿ ಅನುದಾನ ತರುವಲ್ಲಿ ಶಾಸಕದ್ವಯರು ಯಶಸ್ವಿಯಾಗಿದ್ದಾರೆ. ಅನುದಾನ ಹಂಚಿಕೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಬಿಜೆಪಿ ಮಂದಿ ಶಾಸಕರನ್ನು ವಿನಾಕಾರಣ ಟೀಕಿಸುವ ಬದಲು ಮುಖಾಮುಖಿ ಚರ್ಚೆಗೆ ಬರಲಿ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ತೆನ್ನಿರ ಮೈನಾ ಸವಾಲು ಹಾಕಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಪಾಲಿಗೆ ಹೆಚ್ಚಿನ ಅನುದಾನ ಲಭ್ಯವಾಗಿದ್ದು, ಇದು ಗೋಲ್ಡನ್ ಬಜೆಟ್ ಎಂದು ಬಣ್ಣಿಸಿದರು.
ಹಿಂದಿನ ಸರ್ಕಾರಗಳು ಕೊಡಗು ಜಿಲ್ಲೆಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ರೀತಿಯಲ್ಲಿ ಬಜೆಟ್ ಸಂದರ್ಭ ಕಡೆಗಣಿಸುತ್ತಿದ್ದವು. ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರ ವಿಶೇಷ ಕಾಳಜಿ ವಹಿಸಿ ಕೊಡಗು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದೆ. ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಶಾಸಕದ್ವಯರ ಪರಿಶ್ರಮ, ಕ್ರಿಯಾಶೀಲತೆ ಹಾಗೂ ಬದ್ಧತೆಯ ಪರಿಣಾಮ ವಿವಿಧ ಮೂಲಗಳಿಂದ 1800 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ವಿರಾಜಪೇಟೆಯಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ, ಕುಶಾಲನಗರ ಆಸ್ಪತ್ರೆ ಅಭಿವೃದ್ಧಿ ಹೊಂದಿ ಮೇಲ್ದರ್ಜೆಗೇರಲಿದೆ. ಪೊನ್ನಂಪೇಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಯಾಗಲಿದೆ. ಕೂಡಿಗೆ ಕ್ರೀಡಾಶಾಲೆಯ ಅಭಿವೃದ್ಧಿ ಹೊಂದಲಿದೆ, ಜಿಲ್ಲೆಯ ರಸ್ತೆಗಳಿಗೆ ದಾಖಲೆಯ ಅನುದಾನ ಬಂದಿದೆ ಎಂದರು.
ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ಬರುವ ಸುಳಿವು ಅರಿತಿದ್ದ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರು ಜನರ ಹಾದಿ ತಪ್ಪಿಸುವ ಸಲುವಾಗಿ ವಿನಾಕಾರಣ ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿ ಈ ಹಿಂದಿನ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದೆ ಎಂದು ಮೈನಾ ಆರೋಪಿಸಿದರು. ಪ್ರತಿಭಟನೆಯಲ್ಲಿ ಕೆಲವರು ಮನ ಬಂದಂತೆ ಶಾಸಕರ ಬಗ್ಗೆ ಅವಹೇಳನಕರ ಪದ ಪ್ರಯೋಗ ಮಾಡಿರುವುದು ಅವರ ನೈತಿಕ ಮಟ್ಟ ಎಷ್ಟು ಕುಸಿದಿದೆ ಎಂಬುವುದನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಿನದ 18 ಗಂಟೆಗಳ ಕಾಲ ಕ್ಷೇತ್ರದ ಜನರ ಪ್ರಗತಿಗಾಗಿ ಶ್ರಮಿಸುತ್ತಿರುವ ಶಾಸಕದ್ವಯರ ಬಗ್ಗೆ ಅಪಪ್ರಚಾರ ಮಾಡುವುದನ್ನು ಬಿಜೆಪಿ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಸೇವಾದಳ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಡಿಸಿಸಿ ಸದಸ್ಯ ಖಲೀಲ್ ಬಾಷಾ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ ಹಾಗೂ ಮಡಿಕೇರಿ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಉಪಸ್ಥಿತರಿದ್ದರು.