


ಮಡಿಕೇರಿ ಮಾ.13 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಸ್ಥಳನಾಮಗಳ ಅಧ್ಯಯನ ಹಾಗೂ ಮಾಹಿತಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಸುಳ್ಯ ತಾಲೂಕನ್ನು ಆಯ್ದುಕೊಳ್ಳಲಾಗಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಕಾರದಲ್ಲಿ ನಡೆದ ಸ್ಥಳನಾಮ ಅಧ್ಯಯನ ಮತ್ತು ಮಾಹಿತಿ ಸಂಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಂದು ಸ್ಥಳದ ಹೆಸರಿಗೂ ಒಂದೊಂದು ಕಾರಣ, ಭೌಗೋಳಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ. ಆ ದಿಸೆಯಲ್ಲಿ ಕಾಲ ಕ್ರಮೇಣದಲ್ಲಿ ಬರಬರುತ್ತಾ ಬಾಯಿಂದ ಬಾಯಿಗೆ ಮಾತನಾಡುವ ಸಂದರ್ಭದಲ್ಲಿ ಆಯಾಯ ಕಾಲಕ್ಕೆ ತಕ್ಕಂತೆ ಊರಿನ ಹೆಸರು ಬದಲಾಗುತ್ತಾ ಹೋದದ್ದೂ ಇದ್ದು, ಹಳೇ ಹೆಸರನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ಸದಾನಂದ ಮಾವಜಿ ನುಡಿದರು. ಆಧುನಿಕ ಯುಗದಲ್ಲಿ ಮೂಲ ಹೆಸರನ್ನು ಬದಲಿಸಿ ಯಾವುದಾದರು ಖ್ಯಾತನಾಮರ ಹೆಸರಿನೊಂದಿಗೆ ಮರುನಾಮಕರಣ ಮಾಡುವುದೂ ನಡೆಯುತ್ತಿದೆ. ಈ ಸ್ಥಳದ ಮೂಲ ಹೆಸರು ಮತ್ತು ಅದರ ಮೂಲಸ್ವರೂಪದ ವಿವರಣೆ, ಆ ಊರಿಗೆ ಆ ಹೆಸರು ಬರಲು ಕಾರಣ ಮತ್ತಿತರ ಕುತೂಹಲಕಾರಿ ಹಾಗೂ ಆಸಕ್ತಿಯುತ ಅಂಶಗಳನ್ನು ಕಲೆ ಹಾಕುವುದು ಮತ್ತು ಅದನ್ನು ಸಂಗ್ರಹಿಸಿ ರಕ್ಷಿಸುವುದು ಸ್ಥಳನಾಮ ಕಾರ್ಯದ ಉದ್ದೇಶವಾಗಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ವಿವರಿಸಿದರು. ಕೃಷಿಯಿಂದ ಆರಂಭವಾದ ಜೀವನ ಮಾನವರ ಬದುಕು ಕ್ರಮೇಣ ಒಂದೆಡೆ ನೆಲೆ ಪಡೆದುಕೊಂಡಿತು. ಮಾನವ ಕೃಷಿ ಕಲಿತುಕೊಂಡು ಅದನ್ನು ಅವಲಂಭಿಸಲಾರಂಭಿಸಿದ ಬಳಿಕ ಗುಂಪುಗುಂಪಾಗಿ ವಾಸಿಸತೊಡಗಿದ್ದರು. ಇದು ಗ್ರಾಮ ಕಲ್ಪನೆಯ ಪೂರ್ವ ಸ್ಥಿತಿ ಎಂದು ಹೇಳಬಹುದು ಎಂದು ಅವರು ತಿಳಿಸಿದರು. ಆಯಾಯ ಭೌಗೋಳಿಕ ಪರಿಸರದಲ್ಲಿ ವಾಸಿಸುವ ಗುಂಪುಗಳ ನೆಲೆಗಳು ಪ್ರಾರಂಭವಾದವು. ವ್ಯಕ್ತಿಯಿಂದ ವ್ಯಕ್ತಿಯನ್ನು ಪ್ರತ್ಯೇಕಿಸಲು ಹೆಸರಿಡುವುದು ಅನಿವಾರ್ಯವಾಯಿತು, ತದನಂತರ ಇದು ಸಂಪ್ರದಾಯವಾಯಿತು ಹೀಗೆ ತನ್ನ ಕುಟುಂಬಕ್ಕೂ ತಾನು ನೆಲೆ ನಿಂತ ಊರಿಗೂ ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅಕಾಡೆಮಿ ಅಧ್ಯಕ್ಷರು ಪ್ರತಿಪಾದಿಸಿದರು. ಸ್ಥಳನಾಮಗಳಿಗೆ ಅದರದೇ ಆದ ಅನನ್ಯವಾದ ಇತಿಹಾಸವಿದೆ. ಮುಖ್ಯವಾಗಿ ಇತಿಹಾಸವನ್ನು ಆಧರಿಸಿಯೇ ಸ್ಥಳನಾಮಗಳ ಅಧ್ಯಯನ ಇತ್ತೀಚೆಗೆ ಹೆಚ್ಚಾಗಿ ಸಾಗುತ್ತಿದೆ. ಇಂಗ್ಲೀಷ್‍ನಲ್ಲಿ ಸ್ಥಳನಾಮಶಾಸ್ತ್ರವನ್ನು `Toponomy’ ಎಂದು ಕರೆಯುತ್ತಾರೆ. “Toponomy’ ಮೂಲತಃ ಗ್ರೀಕ್‍ನ `Topos’ ಮತ್ತು “Namos’ ಎಂಬ ಎರಡು ಸಂಯುಕ್ತ ಪದಗಳಿಂದ ಬಂದುದಾಗಿದೆ. ಟೋಪೋಸ್ ಅಂದರೆ ಸ್ಥಳ ಮತ್ತು ಒನೋಮಿಯಾ ಅಂದರೆ ಹೆಸರು ಎಂಬುದು ಸ್ಥಳನಾಮಗಳ ಅಧ್ಯಯನವನ್ನು ಉಲ್ಲೇಖಿಸುತ್ತವೆ. ಟೋಪೋನಮಿ ಅಂದರೆ ಸ್ಥಳನಾಮಶಾಸ್ತ್ರ. ಹಾಗಾಗಿ ಇದೂ ಒಂದು ವಿಜ್ಞಾನವೇ ಆಗಿದ್ದು ವೈಜ್ಞಾನಿಕ ಮಾದರಿಯಲ್ಲಿ ಸ್ಥಳನಾಮ ಸಂಗ್ರಹ ಮಹತ್ವವಾಗುತ್ತದೆ ಎಂದರು. ಸ್ಥಳನಾಮಗಳು ಅಥವಾ ಸ್ಥಳನಾಮಗಳ ಅಧ್ಯಯನವಾದ ಟೋಪೋಸ್: ಸ್ಥಳ ಮತ್ತು ಒನೊಮಿಯಾ: ಹೆಸರು ಐತಿಹಾಸಿಕ ಮತ್ತು ಸಾಂಸ್ಕೃತಿಕ ಭೂಗೋಳಶಾಸ್ತ್ರಜ್ಞರಲ್ಲಿ ದೀರ್ಘ ಸಂಶೋಧನಾ ವಿಷಯವಾಗಿದೆ. ಆದಾಗ್ಯೂ, ಇದು ಭೂಗೋಳಶಾಸ್ತ್ರಜ್ಞರಿಗೆ ಮಾತ್ರವೇ ಶೈಕ್ಷಣಿಕ ಮೀಸಲು ಅಲ್ಲ. ಪುರಾತತ್ತ್ವಜ್ಞರು, ಮಾನವಶಾಸ್ತ್ರಜ್ಞರು, ಇತಿಹಾಸಕಾರರು, ಜಾನಪದ ಶಾಸ್ತ್ರಜ್ಞರು, ನಕ್ಷೆಶಾಸ್ತ್ರಜ್ಞರು, ಭಾಷಾಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಯೋಜಕರು, ಕವಿಗಳು, ಸಾಹಿತಿಗಳು, ಸಾಂಸ್ಕೃತಿಕ ತಜ್ಞರು ಮತ್ತು ಮಾಹಿತಿಯುಕ್ತ ಸಾರ್ವಜನಿಕರೆಲ್ಲರೂ ಸ್ಥಳನಾಮಗಳ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು. `ನೀರಿನ ಮೂಲಗಳು, ಭೂರೂಪಗಳು ಮತ್ತು ಜೈವಿಕ ರೂಪಗಳು, ಭತ್ತದ ಗದ್ದೆಗಳು ಮತ್ತು ಮಾರ್ಗಗಳು. ಪರಿಸರ ದಾಖಲೆ ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ಸ್ಥಳನಾಮಗಳಲ್ಲಿ ವಿಭಿನ್ನ ಪ್ರಮಾಣದಲ್ಲಿ ಸಂರಕ್ಷಿಸಲಾಗಿದೆ. ಆದಾಗ್ಯೂ, ಹಿಂದಿನ ಅನೇಕ ಸ್ಥಳನಾಮಗಳು ಮತ್ತು ಅವುಗಳಿಂದ ಸಂಕ್ಷೇಪಿಸಲಾದ ಸಾಂಸ್ಕೃತಿಕ, ಭಾಷಾ ಮತ್ತು ಮಾನವ ಇತಿಹಾಸವು ಸಮಯ, ಬದಲಾವಣೆ ಮತ್ತು ಇತರೇ ಕಾರಣಗಳಿಂದ ಮರೆಯಾಗಿವೆ ಎಂದು ಸದಾನಂದ ಮಾವಜಿ ಹೇಳಿದರು. ಸ್ಥಳನಾಮಗಳ ಬಗ್ಗೆ ಆಕಷರ್Àಣೆ ಉಂಟಾಗಲು ಇತಿಹಾಸಗಳು ಮತ್ತು ಮಾದರಿಗಳು, ಸ್ಥಳಗಳ ಭೌತಿಕ ಭೌಗೋಳಿಕತೆ, ಅನುಕ್ರಮ ಉದ್ಯೋಗ, ಜನಾಂಗೀಯ ಮತ್ತು ರಾಜಕೀಯ ಬದಲಾವಣೆಗಳು, ರಾಷ್ಟ್ರೀಯತಾವಾದಿ ಭಾವನೆಗಳು, ಮಾನವ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಪ್ರಸರಣ ಪ್ರಕ್ರಿಯೆಗಳ ಬಗ್ಗೆ ಅಮೂಲ್ಯವಾದ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುತ್ತದೆ.`ಈ ಸ್ಥಳಗಳಿಗೆ ಹೇಗೆ ಈ ಹೆಸರು ಬಂದಿತು, ಅದರ ಮೂಲವೇನು, ಯಾರು ಕೊಟ್ಟರು, ಏಕೆ ಕೊಟ್ಟರು, ಮೂಲ ಭಾಷೆ ಯಾವುದು, ಈ ಹೆಸರು ಕೊಟ್ಟ ಉದ್ದೇಶವೇನು, ಅರ್ಥವೇನು, ಸದ್ಯ ಇದಕ್ಕೆ ಮೂಲ ಹೆಸರು ಇದೆಯೇ ಮುಂತಾದವುಗಳ ಅಭ್ಯಾಸ ನಮ್ಮ ಚರಿತ್ರೆ, ಸಂಸ್ಕೃತಿ, ಪ್ರಭಾವ, ಅಭಿರುಚಿ ಮುಂತಾದವುಗಳನ್ನು ಅರ್ಥಮಾಡಿಕೊಳ್ಳಲು, ಅಭ್ಯಾಸ ಮಾಡಲು ನೆರವಾಗುತ್ತವೆ. ಇಂತಹ ಅಭ್ಯಾಸಕ್ಕೆ ಜಾನಪದ ಪ್ರಕಾರಗಳು, ಶಾಸನಗಳು, ಚರಿತ್ರೆ ಮತ್ತು ದಾಖಲೆಗಳ ಸಹಾಯವೂ ಬೇಕಾಗುತ್ತದೆ’ ಎಂದರು. ಸದಸ್ಯ ಸಂಚಾಲಕರಾದ ಚಂದ್ರಶೇಖರ ಪೇರಾಲು ಅವರು ಮಾತನಾಡಿ ಸುಳ್ಯಕ್ಕೆ ಸುಳ್ಯವೆಂಬ ಹೆಸರು ಯಾಕಾಗಿ ಬಂದಿದೆ ಎಂಬುದನ್ನು ನೋಡುವುದಾದರೆ, ಸುಳ್ಯ ಎಂಬುದ ಮೂಲ ಸೂಳಿಯ, ಸೂಳಯ ಆಗಿದ್ದು ಸುಳ್ಯ ಆಗಿದೆಯಂತೆ! ಸುಮಾರು 1900ರ ತನಕ ಸರಕಾರಿ ವ್ಯವಹಾರ ಪತ್ರಗಳಲ್ಲಿ ಸೂಳಿಯವೆಂದೇ ಕರೆಯಲ್ಪಡುತ್ತಿತ್ತು ಎಂಬುದಾಗಿ ದಾಖಲೆಗಳು ಹೇಳುತ್ತವೆ. ‘ಯ’ ಎಂಬ ಅಕ್ಷರವನ್ನು ಊರು ಎಂಬ ಅರ್ಥದಲ್ಲಿ ಉಪಯೋಗಿಸಲ್ಪಡುತ್ತದೆ. ಸೂಳಯ್ಯ ಅಂದರೆ ವಾದ್ಯ ನುಡಿಸು, ಸೂಳ್‍ಗರೆ ಅಂದರೆ ವಾದ್ಯ ಧ್ವನಿಯಿಂದ ಬರಮಾಡು ಎಂಬ ಅರ್ಥವೆಂದು ವ್ಯಾಖ್ಯಾನಿಸಲಾಗಿದೆ ಎಂದು ವಿವರಿಸಿದರು. ಹೀಗಾಗಿ ಸುಳ್ಯ ಒಂದು ಸಂಪರ್ಕ ಸ್ಥಳವಾಗಿದ್ದು ದೂರದಲ್ಲಿದ್ದ ಕಾವಲು ಪಡೆಗಳಿಗೆ ಕೊಂಬುಊದಿ ಸೂಚನೆಕೊಡುವ ಸ್ಥಳವಾಗಿದ್ದು, ಸೂಳಿಯವಾಗಿ ಕೊನೆಗೆ ಸುಳ್ಯವಾಗಿರಬಹುದು ಎಂಬುದಾಗಿ ವಿದ್ವಾನ್ ದಿ.ಕೊಳಂಬೆ ಪುಟ್ಟಣ್ಣ ಗೌಡರು ವಿಶ್ಲೇಷಿಸಿದ್ದಾರೆ ಎಂದು ತಿಳಿಸಿದರು. ಇಲ್ಲಿ ಹರಿಯುವ ಪಯಸ್ವಿನಿ ನದಿಯಲ್ಲಿ ದೊಡ್ಡ ಸುಳಿ ಇರುವ ಕಾರಣ ಸುಳ್ಯ ಎಂಬ ಹೆಸರು ಬಂದಿರಬೇಕೆಂಬ ಅಭಿಪ್ರಾಯವೂ ಇದೆ. ಸುಳ್ಯವು ತುಳುನಾಡು ಹಾಗೂ ಕೊಡಗಿನ ಒಂದು ಗಡಿಪ್ರದೇಶ. ಹೀಗಿರುವಾಗ ರಾಜರುಗಳ ಸೇನೆಯ ತಂಗುದಾಣವಾಗಿದ್ದು ಇಲ್ಲಿಂದ ಅರಸರಿಗೆ ವರ್ತಮಾನಗಳು ಹೋಗುವ ಏರ್ಪಾಡು ಇದ್ದಿರಬಹುದು ಈ ಹಿನ್ನೆಲೆಯಲ್ಲಿ ಸೂಳಾಯಿತ ಎಂದರೆ ಓಲೆಕಾರ ಡಂಗೂರ ಸಾರುವವನು ಎಂಬ ಅರ್ಥವೂ ಇರುವುದರಿಂದ ಇದು ಸೂಳಯ, ಸೂಳಿಯ, ಸುಳ್ಯ ಆಗಿರಬಹುದೆಂಬ ವಿಶ್ಲೇಷಣೆ ದೊರೆಯುತ್ತದೆ ಎಂದು ತಿಳಿಸಿದರು. ಹೀಗೆ ಸ್ಥಳನಾಮಗಳ ಅಧ್ಯಯನವು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ನಮ್ಮ ದೇಶದಲ್ಲಿ ಈ ಕುರಿತು ಸಾಕಷ್ಟು ಕೆಲಸಗಳು ಆಗಿದ್ದರೂ ವಿದೇಶಗಳಂತೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲವೆನ್ನಬಹುದು. ಅಲ್ಲಿ ಪ್ರತಿ ನಗರ-ಹಳ್ಳಿ ಅಥವಾ ಪ್ರದೇಶದ ಹೆಸರಿನ ಬಗೆಗೆ ತಜ್ಞರು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಇದೇ ರೀತಿ ನಮ್ಮಲ್ಲಿಯೂ ನಡೆದರೆ ಪ್ರತಿಯೊಂದು ಸ್ಥಳಗಳ ಕುರಿತು ಅಧಿಕೃತ ದಾಖಲೆ ಸೃಷ್ಟಿಯಾಗುತ್ತದೆ ಎಂದು ಚಂದ್ರಶೇಖರ ಪೇರಾಲು ಹೇಳಿದರು. ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರುದ್ರಕುಮಾರ್, ವಿದ್ಯಾರ್ಥಿ ಕ್ಷೇಮ ಅಭಿವೃದ್ಧಿ ಅಧಿಕಾರಿ ರತ್ನವತಿ, ಎನ್‍ಎಸ್‍ಎಸ್ ಅಧಿಕಾರಿ ಹರಿಪ್ರಸಾದ್, ಚಿತ್ರಲೇಖಾ ಇತರರು ಇದ್ದರು.