


ಮಡಿಕೇರಿ NEWS DESK ಮಾ.12 : ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ಗೆ ಒಳಪಟ್ಟ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಬಿ.ಕೆ.ಸಿಂಚನ, ಯೋಗಾಸನದ ಮೂರು ಪ್ರಕಾರಗಳಲ್ಲಿ ವಿಶಿಷ್ಟ ಸಾಧನೆಯೊಂದಿಗೆ ಗೋಲ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ತನ್ನ ಹೆಸರನ್ನು ದಾಖಲಿಸಿ ಅಪೂರ್ವ ಸಾಧನೆಗೈದಿದ್ದಾಳೆ. ಮಧ್ಯಪ್ರದೇಶದ ಇಂದೋರ್‌ನ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಏಷಿಯಾ ವಿಭಾಗದ ಮುಖ್ಯಸ್ಥರು ಹಾಗೂ ತೀರ್ಪುಗಾರರಾಗಿ ಪಾಲ್ಗೊಂಡಿದ್ದ ಡಾ.ಮನೀಶ್ ಬಿಷ್ಣೋಯ್ ಅವರ ಸಮ್ಮುಖದಲ್ಲಿ ಶಾಲೆಯ ಆವರಣದಲ್ಲಿ ಸಿಂಚನ ಯೋಗಾಸನಗಳನ್ನು ಪ್ರದರ್ಶಿಸಿ ವಿಶ್ವ ದಾಖಲೆ ಬರೆದರು. ಈ ಸಂದರ್ಭ ಡಾ.ಮನೀಶ್ ಬಿಷ್ಣೋಯ್ ಅವರು, ‘ಡಿಂಪಾಸನ’ದಲ್ಲಿ 14 ಮೀಟರ್‌ನ್ನು ಕ್ರಮಿಸುವ ಮೂಲಕ ಸಿಂಚನ ತನ್ನ ಹೆಸರಿನಲ್ಲೇ ಇದ್ದ 10 ಮೀಟರ್ ದಾಖಲೆಯನ್ನು ಮುರಿದು ವಿಶ್ವದಾಖಲೆ ಮಾಡಿದ್ದಾಳೆ. ‘ಉರಭ್ರಾಸನ’ದಲ್ಲಿ 1.04 ನಿಮಿಷ ಏಕಸ್ಥಿತಿಯಲ್ಲಿ ಇರುವ ಮೂಲಕ ಹಾಗೂ ‘ಮೃಗ ಮುಖಾಸನ’ದಲ್ಲಿ 1.45 ನಿಮಿಷ ಏಕಸ್ಥಿತಿಯಲ್ಲಿ ಇರುವ ಮೂಲಕ ಈಕೆ ವಿಶ್ವದಾಖಲೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿರುವುದಾಗಿ ಘೋಷಿಸಿದರು. ::: ಒಂದೇ ಬಾರಿಗೆ ಮೂರು ‘ವಿಶ್ವ ದಾಖಲೆ’ ::: ಯುಎಸ್‌ನ್ನು ಮುಖ್ಯ ನೆಲೆಯನ್ನಾಗಿ ಹೊಂದಿರುವ ಗೋಲ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ, ವಿಶ್ವದ ಅಪರೂಪದ ವಿದ್ಯಮಾನಗಳನನ್ನು ದಾಖಲಿಸಿಕೊಂಡು ಬರುತ್ತಿದೆ. 11 ವರ್ಷದ ಬಾಲಕಿ ಒಂದೇ ಬಾರಿಗೆ ಮೂರು ವಿಶ್ವ ದಾಖಲೆ ಮಾಡಿರುವುದು ಅಪರೂಪದಲ್ಲಿ ಅಪರೂಪದ ವಿದ್ಯಮಾನವೆಂದು ಡಾ.ಮನೀಶ್ ಬಿಷ್ಣೋಯ್ ಅಭಿಪ್ರಾಯಪಟ್ಟರು.
::: ಪ್ರಮಾಣ ಪತ್ರ ಪ್ರದಾನ ::: ಯೋಗಾಸನದಲ್ಲಿ ಮೂರು ವಿಶ್ವ ದಾಖಲೆ ಮಾಡಿದ್ದಕ್ಕಾಗಿ ಡಾ.ಮನೀಶ್ ಬಿಷ್ಣೋಯ್ ಅವರು ಬಿ.ಕೆ.ಸಿಂಚನಗಳಿಗೆ, ಅತಿಥಿ ಗಣ್ಯರ ಸಮ್ಮುಖದಲ್ಲಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು. ::: ನಮ್ಮ ಹೆಮ್ಮೆ ::: ಸಿಂಚನಳ ವಿಶ್ವ ದಾಖಲೆಯನ್ನು ಸಾಕ್ಷೀಕರಿಸಿದ ಶ್ರೀ ಆದಿ ಚುಂಚನಗಿರಿ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು ಮಾತನಾಡಿ, ನಮ್ಮ ಶಾಲೆಯ ಬಾಲಕಿ ವಿಶ್ವ ದಾಖಲೆ ಮಾಡಿರುವುದು ಹೆಮ್ಮೆಯೇ ಆಗಿದೆ. ತಂದೆ ತಾಯಿ ಹಾಗೂ ಶಿಕ್ಷಕರ ಮಾರ್ಗದರ್ಶನದೊಂದಿಗೆ ಈಕೆ ಮತ್ತಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸಿದರು.ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಇದೊಂದು ಅಪರೂಪದ ಕ್ಷಣ. ಸಿಂಚನಳ ವಿಶ್ವದಾಖಲೆ ಈ ನಾಡಿಗೆ, ರಾಜ್ಯಕ್ಕೆ ಹೆಮ್ಮೆ ತರುವ ವಿಚಾರವಾಗಿದೆ. ಯೋಗಾಸನವನ್ನು ಇಡೀ ವಿಶ್ವಕ್ಕೆ ‘ಯೋಗ ದಿನ’ದ ಆರಂಭದ ಮೂಲಕ ಪ್ರಧಾನಿ ಮೋದಿ ಅವರು ಪರಿಚಯಿಸಿದ್ದು, ಇದನ್ನು ಟೀಕಿಸುತ್ತಿದ್ದವರು ಇಂದು ಯೋಗಾಸನಕ್ಕೆ ಮಾರುಹೋಗಿದ್ದಾರೆ. ಯೋಗಾಸನದ ಮೂಲಕ ಆರೋಗ್ಯದೊಂದಿಗೆ ಏಕಾಗ್ರತೆಯನ್ನು ಕಂಡುಕೊಳ್ಳಲು ಸಾಧ್ಯವಿದ್ದು, ಪ್ರತಿಯೊಬ್ಬರು ಇದರತ್ತ ಆಸಕ್ತರಾಗುವಂತೆ ಕರೆ ನೀಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಬಾಲಕಿಯ ಸಾಧನೆಗೆ ಶುಭ ಹಾರೈಸಿದರು. ಸಿಂಚನಳ ತಾಯಿ ರೇಣುಕ, ತಂದೆ ಬಿ.ಸಿ.ಕೀರ್ತಿಕುಮಾರ್ ಹಾಗೂ ವೇದಿಕೆಯಲ್ಲಿ ಶಾಲೆಯ ವಿಶ್ರಾಂತ ಪ್ರಾಂಶುಪಾಲ ಬಿ.ಆರ್.ಜೋಯಪ್ಪ, ಡಿಸಿಪಿಐ ರಂಗಧಾಮಪ್ಪ, ನಿವೃತ್ತ ಉಪನ್ಯಾಸಕ ಶಿವರಾಂ, ಆಯುಷ್ ಇಲಾಖೆಯ ಡಾ.ಅರುಣ್ ಉಪಸ್ಥಿತರಿದ್ದರು. ಇದೇ ಸಂದರ್ಭ ಅತಿಥಿ ಗಣ್ಯರನ್ನು ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು. ಯೋಗ ಗುರು ಕೆ.ಕೆ.ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಿಂಚನಳ ವಿಶ್ವ ದಾಖಲೆಯ ಯೋಗ ಪ್ರದರ್ಶನವನ್ನು ಗ್ರಾಮಸ್ಥರು, ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.