


ಸುಂಟಿಕೊಪ್ಪ NEWS DESK ಮಾ.14 : ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೊಳವೆ ಬಾವಿಗಳ ಮೋಟಾರ್ ಗಳ ದುರಸ್ತಿ ಕಾರ್ಯ ಮತ್ತು ನೀರು ಸರಬರಾಜಿನ ಪೈಪ್ ಲೈನ್ ಗಳು ಹಾನಿಗೀಡಾದ ಕಾರಣ ಸಮಸ್ಯೆ ಉಲ್ಬಣಿಸಿದೆ. ಬಡಾವಣೆಗಳ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದ ಹಿನ್ನೆಲೆ ಸುಂಟಿಕೊಪ್ಪ ಗ್ರಾ.ಪಂ ಮೋಟಾರ್ ಗಳ ದುರಸ್ತಿ ಕಾರ್ಯ ಕೈಗೊಂಡಿತು. ಆದರೆ ಇದರ ನಡುವೆಯೇ ಪೈಪ್ ಗಳು ಹಾನಿಗೀಡಾದ ಹಿನ್ನೆಲೆ ಮತ್ತಷ್ಟು ದಿನಗಳು ನೀರು ಇಲ್ಲದಂತ್ತಾಯಿತು. ಪರಿಸ್ಥಿತಿ ಕೈಮೀರುವುದನ್ನು ಅರಿತ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಆಡಳಿತ ಮಂಡಳಿಯ ಪ್ರಮುಖರು ತಕ್ಷಣ ಎಚ್ಚೆತ್ತುಕೊಂಡು ಖಾಸಗಿ ತೋಟಗಳಿಂದ ನೀರಿನ ಟ್ಯಾಂಕ್ ಪಡೆದು ಅಗತ್ಯವಿರುವ ಬಡಾವಣೆಗಳಿಗೆ ನೀರು ಸರಬರಾಜು ಮಾಡಿದರು. ಅಲ್ಲದೆ ಹಾನಿಗೀಡಾದ ಪೈಪ್ ಲೈನ್ ಗಳ ದುರಸ್ತಿ ಕಾರ್ಯವನ್ನು ಕೂಡ ಕೈಗೊಂಡರು. ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಗ್ರಾ.ಪಂ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗಕ್ಕೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.