


ಮಡಿಕೇರಿ NEWS DESK ಮಾ.17 : ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಮತ್ತು ಕೊಡಗು ವಿಶ್ವ ವಿದ್ಯಾನಿಲಯವನ್ನು ಮುಚ್ಚದಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿತು. ಸೋಮವಾರಪೇಟೆಯ ಜೆಸಿ ವೇದಿಕೆಯಲ್ಲಿ ಧರಣಿ ಕುಳಿತ ಬಿಜೆಪಿಯ ವಿವಿಧ ಘಟಕಗಳ ಪ್ರಮುಖರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೊಡಗು ವಿವಿಯನ್ನು ಮುಚ್ಚಬಾರದು, ಸಿ ಮತ್ತು ಡಿ ಭೂಮಿಯ ಗೊಂದಲ ನಿವಾರಿಸಬೇಕು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು, ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ರಾಜ್ಯ ಸರ್ಕಾರದ ನಡೆ ಜನವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಸೋಮವಾರಪೇಟೆ ಮಂಡಳ ಅಧ್ಯಕ್ಷ ಗೌತಮ್‍ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಮಡಿಕೇರಿ ಮಂಡಳ ಅಧ್ಯಕ್ಷ ಉಮೇಶ್, ಪಕ್ಷದ ಪ್ರಮುಖರಾದ ಬಿ.ಬಿ.ಭಾರತೀಶ್, ಮನುಕುಮಾರ್ ರೈ, ಎಚ್.ಕೆ.ಮಾದಪ್ಪ, ವಿ.ಕೆ.ಲೋಕೇಶ್, ತಂಗಮ್ಮ, ಪಿ.ಕೆ.ಚಂದ್ರು, ರವಿ, ಶರತ್‍ಚಂದ್ರ ಇದ್ದರು.