


ಮಡಿಕೇರಿ NEWS DESK ಮಾ.25 : ನೀಮಾ ಕೊಡಗು ಹಾಗೂ ನೀಮಾ ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ಲಯನ್ಸ್ ಮಡಿಕೇರಿ, ಕೊಡಗು ಬ್ಲಡ್ ಡೋನರ್ಸ್ ಮತ್ತು ಕೊಡಗು ಹವ್ಯಕ ವಲಯದ ಸಹಯೋಗದೊಂದಿಗೆ ಮಾ.30 ರಂದು ಮಡಿಕೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನೀಮಾ ಕೊಡಗು ಅಧ್ಯಕ್ಷ ಡಾ.ರಾಜರಾಮ್ ಎ.ಆರ್ ಅವರು ಹುತಾತ್ಮರಾದ ಸುಖದೇವ್, ರಾಜ್ ಗೋಪಾಲ್ ಹಾಗೂ ಭಗತ್ ಸಿಂಗ್ ಸ್ಮರಣಾರ್ಥ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂವೇದನ-2 ಎಂಬ ಹೆಸರಿನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯುತ್ತಿದ್ದು, ಇದರ ಪ್ರಯುಕ್ತ ಮಡಿಕೇರಿಯಲ್ಲೂ ಶಿಬಿರವನ್ನು ಆಯೋಜಿಸಲಾಗಿದೆ. ಒಂದು ಯೂನಿಟ್ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದಾಗಿದೆ. ರಕ್ತದಾನ ಮಹಾದಾನವಾಗಿದ್ದು, ಶಿಬಿರದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ. ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 1 ರವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಹಾ ಕಾರ್ಯದಲ್ಲಿ ಕೈಜೋಡಿಸುವಂತೆ ತಿಳಿಸಿದ್ದಾರೆ. ಇದೇ ದಿನ ವಿಶ್ವದ 8 ದೇಶಗಳಲ್ಲಿ ಒಟ್ಟು 1,50,000 ರಕ್ತದ ಯೂನಿಟ್ ಗಳನ್ನು ಸಂಗ್ರಹಿಸಿ ವಿಶ್ವ ದಾಖಲೆ ಮಾಡುವ ಯೋಜನೆಯನ್ನು ಹೊಂದಲಾಗಿದೆ. ಇದರಿಂದ ದೇಶದಲ್ಲಿ ಇರುವ ರಕ್ತದ ಕೊರತೆಯನ್ನು ನೀಗಿಸಲು ಒಂದು ಅಳಿಲು ಸೇವೆಯನ್ನು ಮಾಡಿದಂತಾಗುತ್ತದೆ. ಬನ್ನಿ ರಕ್ತದಾನ ಮಾಡೋಣ ಆರೋಗ್ಯವಂತರಾಗಿರೋಣ ಜೀವದಾನಕ್ಕೆ ಸೇತುವೆಯಾಗೋಣ ಎಂದು ಡಾ.ರಾಜರಾಮ್ ಕೋರಿದ್ದಾರೆ. ರಕ್ತದಾನ ಮಾಡುವವರು ಹೆಚ್ಚಿನ ಮಾಹಿತಿಗೆ 9886266120, 9036843207, 9480309120 ನ್ನು ಸಂಪರ್ಕಿಸಬಹುದಾಗಿದೆ.