



ಸಿದ್ದಾಪುರ ಮಾ.26 NEWS DESK : ವಿರಾಜಪೇಟೆ ತಾಲ್ಲೂಕಿನ, ಮಾಲ್ದಾರೆ ಗ್ರಾಮ ಪಂಚಾಯಿತಿ ಚೊಟ್ಟೆಪಾಳಿ (ಕಲ್ಲಳ್ಳ) ಜಾಗದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ಕಸವಿಲೇವಾರಿ ಕೇಂದ್ರ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ ನೇತ್ರತ್ವದಲ್ಲಿ ಮಾಲ್ದಾರೆ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು. ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಮಾತನಾಡಿ ಕಸ ವಿಲೇವಾರಿಗೆ ಗುರುತಿಸಿರುವ ಜಾಗದ ಸುತ್ತಮುತ್ತಲಿನಲ್ಲಿ ದಲಿತರು, ಬುಡಕಟ್ಟು ಸಮುದಾಯದವರು ಸೇರಿದಂತೆ ಹಲವು ಕುಟುಂಬಗಳು ವಾಸವಾಗಿದ್ದು, ಜನ ವಸತಿ ಪ್ರದೇಶವಾಗಿದೆ. ಸಮೀಪದಲ್ಲಿ ಅರಣ್ಯ ಪ್ರದೇಶವಿದ್ದು ತೋಡು ನೀರಿನ ಮೂಲಕ ಲಕ್ಷ್ಮಣತೀರ್ಥ ನದಿ ಸೇರುತಿದೆ. ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ನಡೆದಾಡುವ ರಸ್ತೆಯು ಆಗಿದ್ದು ತ್ಯಾಜ್ಯ ವಿಲೇವಾರಿಗೆ ಮುಂದಾದಲ್ಲಿ ಪರಿಸರ ನೀರು ಹಾಳಾಗುವುದರೊಂದಿಗೆ ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗಗಳೊಂದಿಗೆ ಮೂಗು ಮುಚ್ಚಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಳೆಗಾಲ ಸಂದರ್ಭದಲ್ಲಿ ತೋಡಿನ ಮೂಲಕ ನೀರು ತುಂಬುವ ಪ್ರದೇಶವಾಗಿದ್ದು ತ್ಯಾಜ್ಯ ವಿಲೇವಾರಿ ಮಾಡಿದ್ದಲ್ಲಿ ನೀರು ಮಲಿನದೊಂದಿಗೆ ಲಕ್ಷ್ಮಣ ತೀರ್ಥ ನದಿ ಸೇರಲಿದೆ. ಪ್ರಾಣಿಗಳು ಜಾನುವಾರಗಳು ತೋಡು ನೀರನ್ನೆ ಅವಲಂಬಿತರಾಗಿರುವುದರಿಂದ ಪ್ರಾಣಿ ಪಕ್ಷಿಗಳಿಗೂ ಸಂಚಾರ ಎದುರಾಗಲಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಕೊಳಚೆ ಪ್ರದೇಶವಾಗಿ ಮಾರ್ಪಾಡಾಗುವ ಸಂಭವ ಇರುವುದರಿಂದ ಜನ ವಸತಿ ಪ್ರದೇಶ ಬಿಟ್ಟು ಬೇರೆ ಕಡೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಜಾಗ ಗುರುತಿಸಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡಲಿ ಪರಿಸರ ಕೆಡುವುದರಿಂದ, ಇಲ್ಲಿನ ವಿದ್ಯಾರ್ಥಿಗಳಿಗೆ, ನಿವಾಸಿಗಳಿಗೆ ರೋಗ ಹರಡುವ ಸಾಧ್ಯತೆ ಸಹ ಇರುತ್ತದೆ. ಇದರಿಂದಾಗಿ ಇಲ್ಲಿಯ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಇಲ್ಲೇನಾದರೂ ಕಸವಿಲೇವಾರಿ ಕೇಂದ್ರ ಸ್ಥಾಪನೆಯಾದರೆ ಎಲ್ಲರಿಗೊ ಸಂಕಷ್ಟ ತಪ್ಪಿದ್ದಲ್ಲ. ಇಲ್ಲಿನ ಮಕ್ಕಳ ಹಿರಿಯ ನಾಗರೀಕರ ಆರೋಗ್ಯಕ್ಕೆ ಹಾನಿಕಾರವಾಗಿ ಉಸಿರಾಟದ ತೊಂದರೆಯಾಗಿ ಜೀವಹಾನಿಯಾದಲ್ಲಿ ಇದಕ್ಕೆ ಸರ್ಕಾರವೇ ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ತ್ಯಾಜ್ಯ ವಿಲೇವಾರಿ ಘಟಕವನ್ನು ಕೈ ಬಿಟ್ಟು ಆಟದ ಮೈದಾನ ಮಾಡಲಿ ಎಂದು ಹೇಳಿದ ಅವರು ಘಟಕ ಪ್ರಾರಂಭಿಸಲು ಮುಂದಾದಲ್ಲಿ ತೀವ್ರ ರೀತಿಯ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಹುಜನ ಸಮಾಜ ಪಾರ್ಟಿ ಯ ಪ್ರಮುಖರಾದ ಉಮೇಶ್ ಉತ್ತಯ್ಯ, ಸರತಂಗಮ್ಮ, ಡ್ಯಾನಿಸ್, ಕೃಷ್ಣ, ಆನಂದ್, ಕುಮಾರ್, ಅನೀಸ್, ನಿತ್ಯ, ಮೂರ್ತಿ, ಚೇತನ್ ಕುಮಾರ್, ಕಾಫಿ ಬೆಳಗರಾದ ಮಿಟ್ಟು ನಂಜಪ್ಪ,ಬೋಪಣ್ಣ ,ಜಯ,ವಿಷ್ಣು ಕಿರಣ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳು ಸ್ಥಳೀಯ ನಿವಾಸಿಗಳು ಹಾಜರಿದ್ದರು. ಸ್ಥಳಕ್ಕೆ ಅಗಮಿಸಿದ ವಿರಾಜಪೇಟೆ ತಾಸಿಲ್ದಾರ್ ಅನಂತ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬೇಡಿಕೆ ಈಡೇರಿಸುವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ವರಿಸಿದರು.