



ಸಿದ್ದಾಪುರ ಮಾ.26 NEWS DESK : ವಿವಿಧ ಆರೋಗ್ಯ ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದು, ಅನಾರೋಗ್ಯ ಕೋಳಗಾದವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಹಾರೈಕೆ ಮಾಡಿ ಆರೋಗ್ಯ ಕಾಳಜಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಲ್ ಇಂಡಿಯಾ ಕೆ ಎಂ ಸಿ ಸಿ ಸಂಘಟನೆಯ ಸೇವ ಕಾರ್ಯದ ಬಗ್ಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ವಿರಾಜಪೇಟೆ ಆರ್ಜಿ ಗ್ರಾಮದ ಆಶೀರ್ವಾದ ಟರ್ಫ್ ಗ್ರೌಂಡ್ ನಲ್ಲಿ ಕೆಎಂಸಿಸಿ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಜಿಲ್ಲಾ ಎಸ್.ಕೆ.ಎಸ್.ಎಫ್ ಸಂಘಟನೆ ಅಧ್ಯಕ್ಷ ಶುಹೈಬ್ ಫೈಝಿ ಮಾತನಾಡಿ, ಮನುಷ್ಯ ಬದುಕಿ ಬಾಳಿದ ದಿನಗಳ ನಂತರ ತೀವ್ರ ಆರೋಗ್ಯ ಸಮಸ್ಯೆಯಿಂದ ಅಂಗ ವೈಕಲ್ಯ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳಿಗೆ ಒಳಪಟ್ಟು ಜೀವನ್ಮರಣ ಸ್ಥಿತಿಯಲ್ಲಿ ಸುಧರಿಸಿಕೊಳ್ಳಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಅನಾರೋಗ್ಯಕೊಳ್ಳಗಾದ ಸಾವಿರಾರು ಮಂದಿಗೆ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ನೀಡುವ ಮೂಲಕ ಅವರ ಮನೆ ಬಾಗಿಲಿಗೆ ತೆರಳಿ ಆರೈಕೆಯೊಂದಿಗೆ ಮಾನವೀಯ ಸೇವೆಯನ್ನು ನೀಡುತ್ತಿರುವ ಕೆಎಂಸಿಸಿ ಸಂಘಟನೆಯ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಾತಿ ಮತ ಭೇದವಿಲ್ಲದೆ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿರುವ ಕೆ ಎಂ ಸಿ ಸಿ ಸಂಘಟನೆಯ ಸೇವ ಕಾರ್ಯಕ್ಕೆ ದಾನಿಗಳು ಹೆಚ್ಚಿನ ಸಹಕಾರ ನೀಡಿ ಕೈಜೋಡಿಸಬೇಕೆಂದರು. ಆರ್ಜಿ ಗ್ರಾಮದ ಸಂತ ಅನ್ನಮ್ಮ ಚರ್ಚ್ ಫಾದರ್ ರೋನಿ ರವಿಕುಮಾರ್ ಮಾತನಾಡಿ ಶಾಂತಿ ಸಹ ಬಾಳ್ವೆಯ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಮುಂದಾಗುವುದರ ಮೂಲಕ ಸೇವಾ ಮನೋಭಾವದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆದಲ್ಲಿ ಸಹಬಾಳ್ವೆಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು. ಆಲ್ ಇಂಡಿಯಾ ಕೆಎಂಸಿಸಿ ಸಂಘಟನೆಯ ಅಧ್ಯಕ್ಷ ಎಂ.ಕೆ.ನೌಶಾದ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ ಎಂ ಸಿ ಸಿ ಪಾಲಿಟೀವ್ ಹೋಂ ಕ್ಯಾರ್ ಯೂನಿಟ್ ಸಾವಿರಾರು ರೋಗಿಗಳ ಆರೈಕೆಯೊಂದಿಗೆ ವಿವಿಧ ರೀತಿಯ ಆರೋಗ್ಯ ಸೇವೆಗಳನ್ನ ನೀಡುವುದರ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು. ಕೆ.ಎಂ.ಸಿ.ಸಿ ಬೆಂಗಳೂರು ಸೆಂಟ್ರಲ್ ಕಮಿಟಿ ಖಜಾಂಜಿ ಅಬ್ದುಲ್ಲ ಮಾವಳ್ಳಿ , ರಶೀದ್ ಮೌಲವಿ, ಆಶೀರ್ವಾದ ಗ್ರೂಪ್ ನ ಮುಖ್ಯಸ್ಥ ಸಿದ್ದೀಕ್, ಸಂಸುಲ್ ಉಲಮ ಎಜುಕೇಶನಲ್ ಅಕಾಡೆಮಿ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ, ಪ್ರಮುಖರಾದ ಮೊಹಮ್ಮದ್ ಹಾಜಿ, ರಶೀದ್, ಫತಾಹ, ಸಜೀರ್, ಕೂರ್ಗ್ ಹಾಲಿಡೇಸ್ ಮುಖ್ಯಸ್ಥ ಸಿ ಎಚ್ ರಫೀಕ್ ಸೇರಿದಂತೆ ಮತ್ತಿತರರು ಹಾಜರಿದ್ದರು.