




ಮಡಿಕೇರಿ ಮಾ.26 NEWS DESK : ನಗರದ ವಿವಿಧ ಬಡಾವಣೆಗಳ ಸಹಿತ ಒಟ್ಟು 75 ತಡೆಗೋಡೆಗಳ ನಿರ್ಮಾಣಕ್ಕೆ ಅಂಗೀಕಾರ ನೀಡಲಾಗಿದೆ. ಇದಕ್ಕೆ 13 ಕೋಟಿ ರೂ. ಅನುದಾನ ಬೇಕಿದ್ದು, ಈ ಕುರಿತು ನಗರಸಭೆ ಮೂಲಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಗರಸಭಾ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ಮಡಿಕೇರಿ ನಗರ ಸಭೆ ಕೆಲವು ದಿನಗಳ ಹಿಂದೆ 2025-26ನೇ ಸಾಲಿನ ಉಳಿತಾಯ ಬಜೆಟ್ ಮಂಡಿಸಿದ್ದು, ಈ ಕುರಿತು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸಭೆಯ ಪ್ರಾರಂಭದಲ್ಲಿ ಮಾತನಾಡಿದ ನಗರ ಸಭೆ ಸದಸ್ಯ ಮನ್ಸೂರ್, ನಗರದ ವಿವಿಧ ಕಡೆಗಳಲ್ಲಿ ತಡೆಗೋಡೆಗಳ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಸಿದ ನಗರ ಸಭೆ ಆಡಳಿತಾಧಿಕಾರಿ ವೆಂಕಟ್ ರಾಜಾ, ಈಗಾಗಲೇ 75 ಕಡೆಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಇದಕ್ಕೆ ಎನ್‍ಡಿಆರ್ ಎಫ್ ನಿಧಿಯಿಂದ ಅನುದಾನ ಲಭಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ವ್ಯವಹಾರದ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ರಾಜ ಕಾಲುವೆಗಳ ಕಾಂಕ್ರೀಟೀಕರಣ ಮಾಡುವ ಅಗತ್ಯವಿದೆ. ನಗರದೊಳಗೆ 6 ಕಿ.ಮೀ ರಾಜಕಾಲುವೆ ಹಾದು ಹೋಗಿದ್ದು, ಈಗಾಗಲೇ 1.6 ಕಿ.ಮೀ ಕಾಂಕ್ರೀಟೀಕರಣ ಮಾಡಲಾಗಿದೆ. ಇನ್ನುಳಿದ ರಾಜಕಾಲುವೆಯ ಕಾಂಕ್ರೀಟೀಕರಣಕ್ಕಾಗಿ 1 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು. ನಗರಕ್ಕೆ ನೀರು ಪೂರೈಸುವ ಮುಖ್ಯ ಪೈಪ್‍ಲೈನ್ ಒಡೆದು ಹೋಗಿದ್ದು, ಕಾಮಗಾರಿಯ ಟೆಂಡರ್ ಪಡೆದವರು ಕಾಮಗಾರಿ ಆರಂಭಿಸಲು ವಿಳಂಬ ಮಾಡುತ್ತಿದ್ದಾರೆ. ತಕ್ಷಣವೇ ಕಾಮಗಾರಿ ಆರಂಭಿಸಲು ಸೂಚಿಸಬೇಕು. ಇಲ್ಲವಾದಲ್ಲಿ ನಗರದ ಜನತೆಗೆ ನೀರಿನ ಸಮಸ್ಯೆ ಎದುರಾಗಲಿದೆ. ಗುತ್ತಿಗೆ ಪಡೆದವರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಸಭೆಯೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ರಮೇಶ್, ಕಾಮಗಾರಿ ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಸದಸ್ಯ ಅಮಿನ್ ಮೊಹಿಸಿನ್ ವಿವಿಧ ವಿಚಾರಗಳ ಕುರಿತು ಪ್ರಸ್ತಾಪಿಸಿದರು. ಇನ್ನುಳಿದಂತೆ ನಗರಸಭೆಯ ಕಟ್ಟಡ ಮಳಿಗೆ ಹರಾಜು, ಬಾಡಿಗೆ ಪಾವತಿಸಿದ ಜಾಹೀರಾತು ಫಲಕಗಳ ತೆರವು, ಕುರಿ, ಕೋಳಿ, ಮೀನು ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ, ಆಸ್ತಿ ತೆರಿಗೆ ವಿಧಿಸುವುದು, ಬೀದಿ ದೀಪಗಳ ಅಳವಡಿಕೆ, ಅಮೃತ್-2 ಯೋಜನೆ, ಒಳ ಚರಂಡಿ ಕಾಮಗಾರಿ ವಿಳಂಬ, ಸದಸ್ಯರ ಅಧ್ಯಯನ ಪ್ರವಾಸ ಮತ್ತಿತ್ತರ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದೇ ಸಂದರ್ಭ ಪೌರಾಯುಕ್ತರು ಮಂಡಿಸಿದ ತುರ್ತಾಗಿ ಕೈಗೆತ್ತಿಕೊಳ್ಳಬೇಕಿರುವ ಕಾಮಗಾರಿಗಳ ಪಟ್ಟಿಗೆ ಸದಸ್ಯರು ಅನುಮೋದನೆ ನೀಡಿದರು.
::: ಚುನಾವಣೆಗೆ ದಿನಾಂಕ ನಿಗದಿ ::: ನಗರ ಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಪಡಿಸುವಂತೆ ಆಡಳಿತಾಧಿಕಾರಿ ವೆಂಕಟ್ ರಾಜಾ ಅವರು ಸದಸ್ಯರಿಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು ತಾವುಗಳೇ ಒಂದು ದಿನಾಂಕ ನಿಗದಿ ಮಾಡುವಂತೆ ಮನವಿ ಮಾಡಿದರು. ತಾವು ದಿನಾಂಕ ನಿಗದಿ ಮಾಡಿದಲ್ಲಿ ಕೆಲವು ಸದಸ್ಯರು ಹಲವು ಕಾರಣಗಳನ್ನು ಮುಂದಿಡುತ್ತಾರೆ. ಹೀಗಾಗಿ ನೀವುಗಲೇ ದಿನ ನಿಗದಿ ಮಾಡುವಂತೆ ಜಿಲ್ಲಾಧಿಕಾರಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭೆಯಲ್ಲಿದ್ದ ಸದಸ್ಯರು, ನೀವು ಹೇಳಿದ ದಿನಾಂಕದಂದೇ ಚುನಾವಣೆ ನಡೆಯಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು. ಬಳಿಕ ಏಪ್ರಿಲ್ 8 ಅಥವಾ 9ರಂದು ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗುತ್ತದೆ. ಎಲ್ಲಾ ಸದಸ್ಯರಿಗೂ ಈ ಕುರಿತು 1 ವಾರಕ್ಕೂ ಮುನ್ನವೇ ನೋಟೀಸ್ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಇದಕ್ಕೆ ಸದಸ್ಯರು ಸಮ್ಮತಿ ಸೂಚಿಸಿದರು.