ಮಡಿಕೇರಿ NEWS DESK ಮಾ.31 : ಅಮರ ಸುಳ್ಯ ಕ್ರಾಂತಿಯ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅವರ ಹೋರಾಟದ ನೆಲವಾದ ಉಬರಡ್ಕದಲ್ಲೇ ಸ್ಥಾಪನೆಯಾದರೆ ಅವರಿಗೆ ಸೂಕ್ತ ಗೌರವ ಲಭಿಸಿದಂತಾಗುತ್ತದೆ. ಹಾಗಾಗಿ ಉಬರಡ್ಕದಲ್ಲೇ ಅವರ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯ ಬಳಿಯ ಉಬರಡ್ಕದ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉಬರಡ್ಕದ ಅಮೈಮಡಿಯಾರು ಶಾಲಾ ವಠಾರದಲ್ಲಿ ನಡೆದ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ಕಾರ್ಯಕ್ರಮ ಇದು ಮೊತ್ತ ಮೊದಲ ಬಾರಿಗೆ ಅಮರ ಸುಳ್ಯ ಕ್ರಾಂತಿಯನ್ನು ಆರಂಭಿಸಿದಂತಹ ನೆಲದಲ್ಲಿ ನಡೆಯುತ್ತಿದ್ದು, ಇನ್ನು ಮುಂದೆ ಪ್ರತೀ ವರ್ಷವೂ ಈ ಕಾರ್ಯಕ್ರಮ ನಡೆಯಬೇಕು ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಇದರ ನೇತೃತ್ವ ವಹಿಸಿದರೆ ಅಕಾಡೆಮಿ ವತಿಯಿಂದ ಸರ್ವ ಸಹಕಾರ ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ನುಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಚಿಂತಕ ಅರವಿಂದ ಚೊಕ್ಕಾಡಿಯವರು ಅಮರ ಸುಳ್ಯದ ಕ್ರಾಂತಿಯಲ್ಲಿ ರಾಮಯ್ಯ ಗೌಡರ ಪ್ರಸ್ತುತತೆ ಬಗ್ಗೆ ವಿವರಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿ ವತಿಯಿಂದ ಇದರ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಇವರು ಮಾತನಾಡಿ ಈ ಹೋರಾಟದಿಂದ ಸರ್ವಸ್ವವನ್ನೂ ಕಳೆದುಕೊಂಡದ್ದು ಕೆದಂಬಾಡಿ ರಾಮಯ್ಯ ಗೌಡರ ಕುಟುಂಬ. 600 ಎಕರೆ ಜಮೀನನ್ನು ಹೊಂದಿದ್ದ ಕೆದಂಬಾಡಿ ರಾಮಯ್ಯ ಗೌಡರು ಈ ಹೋರಾಟವನ್ನು ಸಂಘಟಿಸಿದ ವೀರರಾಗಿದ್ದು ಅವರ ಪ್ರತಿಮೆಯ ಸ್ಥಾಪನೆಯ ಔಚಿತ್ಯವನ್ನು ತಿಳಿಸಿದರು. ಮಿತ್ತೂರು ಉಳ್ಳಾಕುಲು ನಾಯರ್ ದೈವಸ್ಥಾನದ ಆಡಳಿತ ಮುಖ್ಯಸ್ಥರಾದ ವೆಂಕಟ್ರಮಣ ಕೆದಂಬಾಡಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಬರಡ್ಕ ವಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೋಡು, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸುಳ್ಯ ಗೌಡರ ಯುವ ಸೇವಾಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ, ಉಬರಡ್ಕ ಮಿತ್ತೂರು ಜ್ಞಾನಧಾಮ ಚಾರಿಟೇಬರ್ ಟ್ರಸ್ಟ್ ಸಂಚಾಲಕ ದಾಮೋದರ ಗೌಡ ಮದುವೆಗದ್ದೆ ಉಬರಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಿತ್ರಾ ಪಾಲಡ್ಕ, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ ಸುರೇಶ್ ಎಂ.ಎಚ್., ಅಮೈಮಡಿಯಾರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಅಮೈಮಡಿಯಾರು ವಿನಾಯಕ ಮಿತ್ರ ಬಳಗದ ಅಧ್ಯಕ್ಷ ವಿದ್ಯಾಧರ ಹರ್ಲಡ್ಕ, ನಿವೃತ್ತ ವಾಯುಸೇನಾಧಿಕಾರಿ ಅಡ್ಡಂತಡ್ಕ ದೇರಣ್ಣ ಗೌಡ, ಶಾಲಾ ಮುಖ್ಯೋರಾಧ್ಯಾಯಿನಿ ರಾಮಕ್ಕ ವೇದಿಕೆಯಲ್ಲಿದ್ದರು. ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಶಾಲಾ ದ್ವಾರದ ಬಳಿ ಕೆದಂಬಾಡಿ ರಾಮಯ್ಯ ಗೌಡರ ಹೋರಾಟವನ್ನು ವಿವರಣೆಯನ್ನು ನೀಡುವ ಉಬ್ಬು ಚಿತ್ರದ ಬಳಿ ಕೆದಂಬಾಡಿ ರಾಮಯ್ಯ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸುಳ್ಯದ ಎನ್‌ಸಿಸಿ ವಿಂಗ್ ಹಾಗೂ ನಿವೃತ್ತ ಸೈನಿಕರು ಹಾಗೂ ಸಾರ್ವಜನಿಕರನ್ನೊಳಗೊಂಡ ಮೆರವಣಿಗೆಯು ಸಭಾ ವೇದಿಕೆಯ ತನಕ ಸಾಗಿಬಂದಿತು. ಸಭೆಯಲ್ಲಿ ಎನ್‌ಸಿಸಿ ವಿಂಗ್ ಹಾಗೂ ನಿವೃತ್ತ ಸೈನಿಕರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ಚಂದ್ರಾವತಿ ಬಡ್ಡಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಸಂದೇಶ್ ನಡುಮುಟ್ಲು ಪ್ರಾರ್ಥಿಸಿದರು.






































