





ಮಡಿಕೇರಿ ಏ.2 NEWS DESK : ಕೊಡವ ಕುಟುಂಬಗಳ ನಡುವಣ 23ನೇ ‘ಚೆಕ್ಕೇರ ಕ್ರಿಕೆಟ್ ಪಂದ್ಯಾವಳಿ’ ಏ.6ರಿಂದ ಹುದಿಕೇರಿಯಲ್ಲಿ ಆರಂಭಗೊಳ್ಳಲಿದ್ದು, ಪ್ರಶಸ್ತಿಗಾಗಿ 281 ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆಯೆಂದು ಪಂದ್ಯಾವಳಿ ಆಯೋಜನಾ ಸಮಿತಿಯ ಅಧ್ಯಕ್ಷರಾದ ಚೆಕ್ಕೇರ ಚಂದ್ರ ಪ್ರಕಾಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿತ ಕೊಡವ ಕ್ರಿಕೆಟ್ ಪಂದ್ಯಾವಳಿ ಹುದಿಕೇರಿಯ ಜನತಾ ಪ್ರೌಢಶಾಲಾ ಮೈದಾನ ಮತ್ತು ಕಿರಿಯ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ 41 ದಿನಗಳ ಕಾಲ ನಡೆಯಲಿದೆ ಎಂದರು. ಪುರುಷರ ಕ್ರಿಕೆಟ್‍ನೊಂದಿಗೆ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನೂ ಆಯೋಜಿಸಲಾಗಿದ್ದು, ಇದರಲ್ಲಿ 64 ಕುಟುಂಬ ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿವೆ. ಈ ಪಂದ್ಯಾವಳಿ ಏ.28ರಿಂದ ಆರಂಭಗೊಳ್ಳಲಿದೆಯೆಂದರು. ಚೆಕ್ಕೇರ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಮೇ 19 ರಂದು ನಡೆಯಲಿದೆ. ಪುರುಷರ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ 1 ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ 75 ಸಾವಿರ ರೂ. ಮತ್ತು ಟ್ರೋಫಿ ಹಾಗೂ ಸೆಮಿಫೈನಲ್‍ನಲ್ಲಿ ಪರಾಜಿತ ಎರಡು ತಂಡಗಳಿಗೆ ತಲಾ 25 ಸಾವಿರ ರೂ.ಗಳ ನಗದು ಬಹುಮಾನವನ್ನು ನೀಡಲಾಗುತ್ತದೆ. ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ 30 ಸಾವಿರ ರೂ. ಮತ್ತು ಟ್ರೋಫಿ ಹಾಗೂ ಸೆಮಿಫೈನಲ್‍ನಲ್ಲಿ ಪರಾಜಿತ ಎರಡು ತಂಡಗಳಿಗೆ ತಲಾ 15 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಗುತ್ತದೆಂದು ತಿಳಿಸಿದರು.
ರೋಡ್ ರೇಸ್ :: ಚೆಕ್ಕೇರ ಕ್ರಿಕೆಟ್ ಪಂದ್ಯಾವಳಿಯ ನಡುವೆ ಪೊನ್ನಂಪೇಟೆ-ಹುದಿಕೇರಿ ನಡುವೆ 8 ಕಿ.ಮೀ. ಅಂತರದ ರೋಡ್ ರಿಲೇ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಯಾವುದೇ ಕೊಡವ ಕುಟುಂಬದ ಮೂವರು ಪುರುಷರು ಮತ್ತು ಓರ್ವ ಮಹಿಳೆ ಸೇರಿದಂತೆ ನಾಲ್ವರ ತಂಡಗಳು ಪಾಲ್ಗೊಳ್ಳಬಹುದೆಂದು ಹೇಳಿದರು.
ಪ್ರಬಂಧ ಸ್ಪರ್ಧೆ :: ಕೊಡವ ಕೌಟುಂಬಿಕ ಚೆಕ್ಕೇರ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಇದರ ಬಹುಮಾನವನ್ನು ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ವಿತರಿಸಲಾಗುತ್ತದೆಂದು ಚಂದ್ರ ಪ್ರಕಾಶ್ ತಿಳಿಸಿದರು. ಅಂಜಿಕೇರಿನಾಡ್ ತಕ್ಕಮುಖ್ಯಸ್ಥರಾದ ಚೆಕ್ಕೇರ ರಾಜೇಶ್ ಅವರು ಮಾತನಾಡಿ, ಕೊಡವ ಸಮುದಾಯದ ಪ್ರಮುಖ ಹಬ್ಬಗಳೊಂದಿಗೆ ಹಾಕಿ ಮತ್ತು ಕ್ರಿಕೆಟ್ ಉತ್ಸವವೂ ಪ್ರಸ್ತುತ ಸೇರ್ಪಡೆಯಾಗಿದೆ. ಈ ಪಂದ್ಯಾವಳಿಗಳು ಕೊಡವ ಕುಟುಂಬಗಳನ್ನು ಸೌಹಾರ್ದಯುತವಾಗಿ ಒಂದಾಗಿ ಬೆಸೆಯಲು ಸಹಕಾರಿಯಾಗಿದೆಯೆಂದು ತಿಳಿಸಿದರು.
ಪ್ರದರ್ಶನ ಪಂದ್ಯ :: ಪಂದ್ಯಾವಳಿ ಉದ್ಘಾಟನಾ ದಿನದಂದು ಕೊಡವ ಇಲೆವೆನ್ ಮತ್ತು ಅಮ್ಮಕೊಡವ ಇಲೆವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿದೆಯೆಂದು ಮಾಹಿತಿ ನೀಡಿದರು.
ಉದ್ಘಾಟನೆ :: ಚೆಕ್ಕೇರ ಕಪ್ ಕ್ರಿಕೆಟ್ ಪಂದ್ಯಾವಳಿ ಏ.6 ರಂದು ಆರಂಭಗೊಳ್ಳಲಿದೆ. ಅಂದು ಬೆಳಗ್ಗೆ ಹುದಿಕೇರಿ ಮಹಾದೇವರ ದೇವಸ್ಥಾನದಿಂದ ಮೈದಾನದವರೆಗೆ ಆಕರ್ಷಕ ಮೆರವಣಿಗೆ, 9.30 ಕ್ಕೆ ಧ್ವಜಾರೋಹಣ, 9.45ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 10 ಗಂಟೆಗೆ ವೇದಿಕೆ ಕಾರ್ಯಕ್ರಮಗಳು ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ಕರ್ನಾಟಕ ಸರ್ಕಾರದ ಪ್ರಧಾನ ಇಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಪಂದ್ಯಾವಳಿಯ ಉದ್ಘಾಟನಾ ದಿನದಂದು ಹುದಿಕೇರಿ ಕೊಣಗೇರಿ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಹುಬ್ಬಳ್ಳಿ ಹುಲಿ ಮೊಣ್ಣಯ್ಯ ರಸ್ತೆ ಎಂದು ನಾಮಕರಣ ಮಾಡಲಾಗುವುದು ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ತಂಡಕ್ಕೂ ಪಟ್ಟೋಳೆ ಪಳಮೆ ಪುಸ್ತಕವನ್ನು ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚೆಕ್ಕೇರ ಕ್ರಿಕೆಟ್ ಪಂದ್ಯಾವಳಿ ಆಯೋಜನಾ ಸಮಿತಿ ಕಾರ್ಯದರ್ಶಿ ಚೆಕ್ಕೇರ ದಿಲೀಪ್ ಬೋಪಣ್ಣ, ಸಮಿತಿ ಸದಸ್ಯ ಚೆಕ್ಕೇರ ಕಿರಣ್ ಉಪಸ್ಥಿತರಿದ್ದರು.