




ಸೋಮವಾರಪೇಟೆ NEWS DESK ಏ.5 : ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಸಮೀಪದ ಯಡೂಂಡೆ ಗ್ರಾಮದ ನಿವಾಸಿ ಬಿಜೆಪಿ ಕಾರ್ಯಕರ್ತ ಕಡವಡಿರ ವಿನಯ್ ಸೋಮಯ್ಯ(40) ಅವರ ಅಂತ್ಯಕ್ರಿಯೆ ಅರೆಭಾಷಿಕ ಗೌಡ ಜನಾಂಗದ ಸಂಪ್ರದಾಯದಂತೆ ಸ್ವಗ್ರಾಮದಲ್ಲಿ ಶನಿವಾರ ಸಂಜೆ ನೆರವೇರಿತು. ಅಪರಾಹ್ನ 12.30ಗಂಟೆಗೆ ಪಾರ್ಥೀವ ಶರೀರವನ್ನು ಮನೆಗೆ ತರಲಾಯಿತು. ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸುವ ಮೂಲಕ ಕುಟುಂಬಸ್ಥರು ಗೌರವ ಸಲ್ಲಿಸಿದರು. ಅವಳಿ ಸಹೋದರ ವಿವೇಕ್ ಅಂತಿಮ ವಿಧಿವಿಧಾನ ನೆರವೇರಿಸಿದರು. ಮೃತನ ತಾಯಿ ಚಂಡಿರ ದೇವಕ್ಕಿ, ಪತ್ನಿ ಶೋಭಿತ ಪೂಜೆ ಸಲ್ಲಿಸಿದರು. ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಶಾಸಕ ಶ್ರೀವತ್ಸ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಬಿಜೆಪಿ ಪ್ರಮುಖರಾದ ಬಿ.ಸಿ.ನವೀನ್, ಗೌತಮ್, ಭಾರತೀಶ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು. ನೂರಾರು ಮಂದಿ ವಿನಯ್ ಗೆ ಅಂತಿಮ ನಮನ ಸಲ್ಲಿಸಿದರು. ಸಹೋದರ ವಿವೇಕ್ ಅಗ್ನಿಸ್ಪರ್ಶ ಮಾಡಿದರು.