





ಕಣಿವೆ ಏ.6 NEWS DESK : ಉತ್ತರ ಕೊಡಗಿನ ಪ್ರಮುಖ ಪುಣ್ಯ ಕ್ಷೇತ್ರವಾಗಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು. ರಾಮಲಿಂಗೇಶ್ವರ, ಅಗಸ್ತೇಶ್ವರ, ಗುಹೇಶ್ವರ, ಲಕ್ಷ್ಮಣೇಶ್ವರ ಹಾಗು ಬಸವೇಶ್ವರ ಎಂಬ ಪಂಚ ಲಿಂಗಗಳ ಸನ್ನಿಧಿಯಲ್ಲಿ ಪೂರ್ವಾಭಿಮುಖವಾಗಿ ಹರಿದಿರುವ ಇಲ್ಲಿನ ಕಾವೇರಿ ನದಿಯ ದಂಡೆಯಲ್ಲಿ ನೆರೆದಿದ್ದ ಅಪಾರ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾಯಿತು. ಶ್ರೀ ರಾಮನು ಮರಳಿನಿಂದ ಪ್ರತಿಷ್ಠಾಪಿಸಿದನೆಂಬ ಪ್ರತೀತಿ ಇರುವ ಸನ್ನಿಧಿಯಲ್ಲಿ ಬೆಂಗಳೂರಿನ ವೇದಬ್ರಹ್ಮ ನರಹರಿಶರ್ಮಾ ನೇತೃತ್ವದ ಪುರೋಹಿತರ ತಂಡ ಧಾರ್ಮಿಕ ವಿಧಿಗಳನ್ನು ಪೂರೈಸಿತು. ರಥೋತ್ಸವದ ಅಂಗವಾಗಿ ದೇವಾಲಯದ ಒಳ ಹಾಗೂ ಹೊರ ಆವರಣವನ್ನು ತಳಿರು ತೋರಣಗಳು ಮತ್ತು ಬಗೆ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನಾ ಪದ್ದತಿಯಂತೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ಅಂಚೆಯ ಮೂಲಕ ಕಾಶಿಯಿಂದ ತರಿಸಿದ್ದ ಪವಿತ್ರ ಗಂಗಾ ಜಲವನ್ನು ಅಲಂಕೃತ ಮಂಟಪದಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕಣಿವೆಯ ಶ್ರೀಕ್ಷೇತ್ರಕ್ಕೆ ತಂದು ದೇವರಿಗೆ ಪ್ರೋಕ್ಷಣೆ ಗೈದ ಬಳಿಕ ರಾಮಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ರಥೋತ್ಸವ ಆರಂಭವಾಗುತ್ತಿದ್ದಂತೆಯೇ ಇಷ್ಟಾರ್ಥ ಸಿದ್ಧಿಗೆ ನೆರೆದಿದ್ದ ಅನೇಕ ಭಕ್ತರು ಬಾಳೆ ಹಣ್ಣು ಹಾಗೂ ಜವುನಗಳನ್ನು ರಥದ ಮೇಲೆ ಎಸೆದು ಭಕ್ತಿ ಮೆರೆದುದು ಕಂಡು ಬಂತು. ನಂತರ ಸಂಜೆ ರಥವನ್ನು ಸ್ವಸ್ಥಾನಕ್ಕೆ ಎಳೆದು ತರಲಾಯಿತು. ರಥೋತ್ಸವಕ್ಕೆ ಧಾವಿಸಿದ್ದ ಭಕ್ತರೂ ಕೂಡ ಬಿಸಿಲ ಝಳ ತಾಳಲಾರದೇ ತಂಪು ನೀಡುವ ಅರಳಿ ಮರದ ಕೆಳಗೆ ಕುಳಿತು ಹಾಗೂ ಮಲಗಿ ಧಣಿವಾರಿಸಿಕೊಂಡಿದ್ದು ಕಂಡು ಬಂತು. ರಥ ಸಾಗುವ ಮಾರ್ಗದುದ್ದಕ್ಕೂ ಭಕ್ತಾಧಿಗಳಿಗೆ ಹಲವು ನಿವಾಸಿಗಳು ತಮ್ಮ ಮನೆಗಳ ಮುಂದೆ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ನೀಡುವ ಮೂಲಕ ಭಕ್ತಿ ಭಾವ ಮೆರೆಯುತ್ತಿದ್ದುದು ಕಂಡು ಬಂತು. ಹೆಬ್ಬಾಲೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಕಾಶಿಯ ತೀರ್ಥವನ್ನು ತಂದ ಸಂದರ್ಭ ಕಣಿವೆ ಗ್ರಾಮದ ಪ್ರವೇಶ ದ್ವಾರ ರಾಂಪುರದಲ್ಲಿ ತೋರಣಗಳೊಂದಿಗೆ ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭ ಚಂಡೇ ವಾದ್ಯ, ವೀರಗಾಸೆ ನೃತ್ಯ ಹಾಗೂ ಮಂಗಳ ವಾದ್ಯ ರಥೋತ್ಸವದಲ್ಲಿ ವಿಶೇಷ ಮೆರುಗು ನೀಡಿದವು. ರಥೋತ್ಸವಕ್ಕೆ ಕಾವೇರಿ ನದಿಯ ಮೇಲೆ ನಿರ್ಮಿಸಿರುವ ತೂಗುಸೇತುವೆ ಭಕ್ತರನ್ನು ಆಕರ್ಷಿಸಿತು. ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತ ಸಮೂಹಕ್ಕೆ ದೇವಾಲಯ ಸಮಿತಿಯಿಂದ ಲಾಡು ಹಾಗೂ ಅನ್ನದಾನ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಥೋತ್ಸವದ ಅಂಗವಾಗಿ ಕಣಿವೆಯ ಮುಖ್ಯ ರಸ್ತೆಯಲ್ಲಿ ಮೂರು ದಿನಗಳ ಕಾಲ ವಿವಿಧ ಮಳಿಗೆಗಳನ್ನೊಳಗೊಂಡ ಜಾತ್ರೆ ಆಯೋಜನೆಗೊಂಡಿದೆ. ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯಧ್ಯಕ್ಷ ಕೆ.ಎಸ್.ಮಾಧವ, ಕಾರ್ಯದರ್ಶಿ ಟಿ.ಎನ್.ಶೇಷಾಚಲ,ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ನಿರ್ದೇಶಕರಾದ ಆರ್.ಆರ್. ಮಧು, ಕೆ.ಎಲ್.ಮಹೇಶಕುಮಾರ್, ಇ.ಎಸ್.ಗಣೇಶ್, ಕೆ.ಎಂ.ರಾಕೇಶ್, ಟಿ.ಎಂ.ಕಾರ್ತಿಕ್, ಕೆ.ಸಿ.ನಂಜುಂಡಸ್ವಾಮಿ, ಅರ್ಚಕ ರಾಘವೇಂದ್ರ ಆಚಾರ್, ಉದಯಪ್ರಕಾಶ್ ಒಳಗೊಂಡಂತೆ ದೇವಾಲಯ ಸಮಿತಿ ಪದಾಧಿಕಾರಿಗಳಿದ್ದರು.
ವರದಿ : ಕೆ.ಆರ್.ಗಣೇಶ್