





ಮಡಿಕೇರಿ ಏ.6 NEWS DESK : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯಾ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರಮುಖರು ಕೊಡಗಿನ ಇಬ್ಬರು ಶಾಸಕರ ತೇಜೋವಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.ಪ್ರತಿಭಟನಾಕಾರರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪ್ರತಿಕೃತಿ ದಹಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು, ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಮಾಜಿ ಸಂಸದ ಪ್ರತಾಪ ಸಿಂಹ ಅವರ ಪ್ರತಿಕೃತಿಯನ್ನು ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಮೆರವಣಿಗೆಯ ನಂತರ ಗಾಂಧಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹಿಂದೂ ಧರ್ಮ, ಸಂಸ್ಕøತಿಗಳ ಸಂರಕ್ಷಣೆÉಯ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಬಿಜೆಪಿಗರು, ವಿನಯ್ ಸೋಮಯ್ಯ ಅವರ ಮೃತದೇಹವನ್ನು ತಡೆದು, ಅವರ ಕುಟುಂಬಸ್ಥರಿಗೆ ಅಂತಿಮ ಸಂಸ್ಕಾರಗಳನ್ನು ನಡೆಸಲು ಅಡ್ಡಿಮಾಡಿದ್ದಾರೆ. ಮೃತದೇಹವನ್ನು ಸಾಗಿಸಲು ಅವಕಾಶ ಒದಗಿಸುವ ಕನಿಷ್ಟ ಸಜ್ಜನಿಕೆ ಇಲ್ಲದ, ನಾಗರೀಕತೆಯೇ ಇಲ್ಲದವರು ಬಿಜೆಪಿಗರೆಂದು ಆರೋಪಿಸಿದರು. ಕುಶಾಲನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯ ನಾಯಕರಿಗೆ ಮೃತಪಟ್ಟ ವ್ಯಕ್ತಿಯ ಕನಿಷ್ಟ ಹೆಸರೇ ತಿಳಿದಿಲ್ಲವೆಂದು ಲೆÉೀವಡಿ ಮಾಡಿದ ಎ.ಎಸ್.ಪೊನ್ನಣ್ಣ, ಕುಶಾಲನಗರದಿಂದ ವಿನಯ್ ಸೋಮಯ್ಯ ಅವರ ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗುವಾಗ ಬಿಜೆಪಿಗರು ಎಲ್ಲಿದ್ದರೆಂದು ಪ್ರಶ್ನಿಸಿದರು. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಕುಶಾಲನಗರದಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಬಿಜೆಪಿಯ ಕೆಲವು ಮುಖಂಡರು ಜಿಲ್ಲೆಯ ಶಾಸಕರು ಹಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಸಾಬೀತು ಪಡಿಸಿದರೆ ನಾನು ನಿಮ್ಮಗಳ ಜೀತ ಮಾಡುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಇಬ್ಬರು ಶಾಸಕರು ಜನರ ನಡುವೆಯೇ ಇದ್ದುಕೊಂಡು, ಸಂಕಷ್ಟಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಸಹಿಸಲಾಗದೆ ಬಿಜೆಪಿ ಇದೀಗ ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುತ್ತಿದೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ವಿನಯ್ ಸೋಮಯ್ಯ ಅವರ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ಬಿಟ್ಟು ಅವರ ಸಾವಿನಲ್ಲೂ ಬಿಜೆಪಿ ಮಂದಿ ರಾಜಕೀಯ ಮಾಡುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್‍ಗೆ ಕೆಟ್ಟ ಹೆಸರನ್ನು ತರುವ ಪ್ರಯತ್ನದೊಂದಿಗೆ ಜಿಲ್ಲೆಯ ಪೊಲೀಸರ ವಿರುದ್ಧವೂ ಆರೋಪ ಮಾಡಿದ್ದಾರೆ. ಇಂತಹ ಯಾವುದೇ ಆರೋಪ, ಪ್ರತಿಭಟನೆಗಳಿಗೆ ಕಾಂಗ್ರೆಸ್ ಎದೆ ಗುಂದಲಾರದೆಂದು ಹೇಳಿದರು.
ಕಾಂಗ್ರೆಸ್ ಮುಖಂಡ ಹೆಚ್.ಎಸ್.ಚಂದ್ರಮೌಳಿ ಮಾತನಾಡಿ, ಕೊಡಗನ್ನು ಕಾಂಗ್ರೆಸ್‍ನಿಂದ ಮುಕ್ತಗೊಳಿಸುವುದಾಗಿ ಹೇಳುತ್ತಿದ್ದ ಬಿಜೆಪಿಗರು ಇಂದು ಬಿಲ ಸೇರಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕರ ಹೆಸರು ಸೇರಿಸಬೇಕೆಂದು ಆಗ್ರಹಿಸುವ ಬಿಜೆಪಿಗರಿಗೆ ಕಾನೂನಿನ ಕನಿಷ್ಟ ಜ್ಞಾನವೂ ಇಲ್ಲ. ತನಿಖೆಯ ಸಂದರ್ಭ ಅವರುಗಳ ಪಾತ್ರವಿತ್ತು ಎಂದಾದರೆ ಅವರ ಹೆಸರು ಸೇರುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ ಬಿಜೆಪಿ ನಡೆಯನ್ನು ಖಂಡಿಸಿದರು. ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಟಿ.ಪಿ.ರಮೇಶ್ ಮಾತನಾಡಿ, ಇಬ್ಬರು ಶಾಸಕರು ಗ್ರಾಮೀಣ ಮಟ್ಟದಿಂದಲೆ ಅಭಿವೃದ್ಧಿ ಪರ ಕಾರ್ಯಗಳನ್ನು ನಡೆಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಿಜೆಪಿಗರು ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯವನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಿಜೆಪಿಗರ ಅಪಪ್ರಚಾರಕ್ಕೆ ಸಡ್ಡು ಹೊಡೆದು ಕಾಂಗ್ರೆಸ್ಸಿಗರು ಎದ್ದು ನಿಲ್ಲುವುದು ಅವಶ್ಯವೆಂದು ತಿಳಿಸಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಜಿಲ್ಲೆಯ ಶಾಸಕರ ವಿರುದ್ಧ ಮಾತನಾಡುವ ನೈತಿಕತೆ ಪ್ರತಾಪ ಸಿಂಹ ಅವರಿಗಿಲ್ಲವೆಂದು ತಿಳಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸಂಕೇತ್ ಪೂವಯ್ಯ, ಕೊಲ್ಯದ ಗಿರೀಶ್, ಸುಜು ತಿಮ್ಮಯ್ಯ, ಎಸ್.ಐ.ಮುನೀರ್ ಅಹಮ್ಮದ್, ಬಿ.ವೈ.ರಾಜೇಶ್, ಪ್ರಕಾಶ್ ಆಚಾರ್ಯ, ಆರ್.ಪಿ.ಚಂದ್ರಶೇಖರ್, ಹೆಚ್.ಎ.ಹಂಸ, ಇಸ್ಮಾಯಿಲ್, ಬಿ.ಎಸ್.ತಮ್ಮಯ್ಯ, ನೆರವಂಡ ಉಮೇಶ್ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.